ಉಡುಪಿ ನಗರದ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ: ಎಸ್ಪಿ ಡಾ.ಅರುಣ್
ಉಡುಪಿ : ಅಪರಾಧಗಳ ಬಗ್ಗೆ ಮಾಹಿತಿ ಕಳೆಹಾಕಲು ಅನುಕೂಲ ವಾಗುವ ನಿಟ್ಟಿನಲ್ಲಿ ಉಡುಪಿ ನಗರದ ಎಲ್ಲ ಆಯಾಕಟ್ಟಿನ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಈ ತಿಂಗಳ ಅಂತ್ಯ ದೊಳಗೆ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯು ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಈ ಹಿಂದೆ ಉಡುಪಿ ನಗರಾದ್ಯಂತ ಒಟ್ಟು 90 ಸಿಸಿಟಿವಿಗಳನ್ನು ಆಳವಡಿಸಲಾಗಿತ್ತು. ಅದರಲ್ಲಿ ಕೆಲವು ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ. ಈಗ ಹೊಸದಾಗಿ ಉಡುಪಿ ನಗರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಜಿಲ್ಲಾಡಳಿತ, ನಗರಸಭೆ ಪ್ರಸ್ತಾಪ ಕಳುಹಿಸಲಾಗುವುದು. ಅದೇ ರೀತಿ ಜನಪ್ರತಿನಿಧಿಗಳ ಸಹಕಾರ ಮತ್ತು ಸಿಆರ್‌ಎಸ್ ಅನುದಾನದಲ್ಲಿಯೂ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.
ನಗರದ ಪ್ರವೇಶ ಮತ್ತು ನಿರ್ಗಮನ ಪ್ರದೇಶ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಯಾರು ಬರುತ್ತಾರೆ ಮತ್ತು ಹೋಗು ತ್ತಾರೆ ಎಂಬ ಮಾಹಿತಿ ತಿಳಿಯಲು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈಗಲೇ ಯಾವ ಪ್ರದೇಶದಲ್ಲಿ ಖಾಸಗಿ ಯವರು ಸಿಸಿಟಿವಿಗಳನ್ನು ಅಳವಡಿಸಿದ್ದಾರೆ ಎಂಬುದು ಆ್ಯಪ್ ಮೂಲಕ ಕಂಡುಕೊಳ್ಳಬಹುದು. ಸಿಸಿ ಕ್ಯಾಮೆರಾ ಇಲ್ಲದ ಕಡೆಗಳಿಗೆ ಮಾತ್ರ ಕ್ಯಾಮೆರಾ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಒಟ್ಟು 15 ಜಂಕ್ಷನ್‌ಗಳಲ್ಲಿ ಒಂದೊಂದರಲ್ಲಿ 3-4 ಕ್ಯಾಮೆರಾಗಳನ್ನು ಅಳವಡಿಸ ಲಾಗುವುದು. ಮೊದಲು ಪ್ರಥಮ ಆದ್ಯತೆ ಉಡುಪಿ ನಗರಕ್ಕೆ ಸಿಟಿ ಕ್ಯಾಮೆರಾ ಗಳನ್ನು ಅಳವಡಿಸಿ, ಮುಂದೆ ಎಲ್ಲ ತಾಲೂಕು ಕೇಂದ್ರಗಳಲ್ಲೂ ಅಳವಡಿಸ ಲಾಗುವುದು. ಇದಕ್ಕೆ ಬೇಕಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತೇವೆ ಎಂದು ಎಸ್ಪಿ ತಿಳಿಸಿದರು.