ಕೊಳೆತ ಕಸದ ರಾಶಿ ಮಧ್ಯೆ ಅಸ್ವಸ್ಥರಾಗಿದ್ದ ಎಲ್‌ಐಸಿ ನಿವೃತ್ತ ಅಧಿಕಾರಿ ರಕ್ಷಣೆ
ಉಡುಪಿ, ಸೆ.22: ನಗರದ ಬೈಲೂರು ಎನ್‌ಜಿಓ ಕಾಲನಿಯಲ್ಲಿನ ಮನೆಯೊಂದರಲ್ಲಿ ಕೊಳೆತ ಕಸದ ರಾಶಿಯ ಮಧ್ಯೆ ಅಸ್ವಸ್ಥರಾಗಿದ್ದ ಎಲ್‌ಐಸಿಯ ನಿವೃತ್ತ ಅಧಿಕಾರಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ವರದಿಯಾಗಿದೆ.
ಎಲ್‌ಐಸಿ ಅಧಿಕಾರಿಯಾಗಿ ನಿವೃತ್ತರಾಗಿರುವ ರಂಜನ್(66) ಮನೆಯಲ್ಲಿ ಒಂಟಿಯಾಗಿ ವಾಸ ಮಾಡಿಕೊಂಡಿದ್ದರು. ಮನೆಯ ಎಲ್ಲಾ ಕೋಣೆಗಳು ಕೊಳೆತ ಕಸಗಳು ಮಲಮೂತ್ರದೊಂದಿಗೆ ಹುಳಗಳು ಕೂಡ ಆಗಿದ್ದವು. ಇವರು ಮಾನಸಿಕ ಹಾಗೂ ದೈಹಿಕವಾಗಿ ಅನಾರೋಗ್ಯದಲ್ಲಿದ್ದು ತೀವ್ರ ರಕ್ತದೊತ್ತಡದಿಂದ ಬಳಲು ತ್ತಿದ್ದರು. ಕಳೆದ ಕೆಲವು ದಿನಗಳಿಂದ ಅನ್ನ ಆಹಾರವಿಲ್ಲದೆ ಅಮಾನವೀಯ ರೀತಿ ಯಲ್ಲಿ ಇವರು ಬದುಕು ನಡೆಸುತ್ತಿದ್ದರೆನ್ನಲಾಗಿದೆ.
ಇವರಿಗೆ ಪತ್ನಿ ಮಕ್ಕಳಿದ್ದರೂ ಯಾರು ಕೂಡ ಇವರನ್ನು ನೋಡಿಕೊಳ್ಳುತ್ತಿಲ್ಲ. ಮನೆಯ ಸುತ್ತಮುತ್ತ ದುರ್ವಾಸನೆಯಿಂದ ಕೂಡಿದೆ. ಆಸ್ಪತ್ರೆಯಲ್ಲಿ ವೈದ್ಯರು ವೃದ್ಧರ ಸ್ಥಿತಿ ಚಿಂತಾಜನಕವಾಗಿದ್ದು ಅಂಗಾಂಗಗಳ ವೈಫಲ್ಯತೆ ಆಗಿದೆ ಎಂದು ತಿಳಿಸಿದ್ದಾರೆ. ಹಿರಿಯ ನಾಗರಿಕ ಸಹಾಯವಾಣಿ ಹಾಗೂ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಬಾಳಿಗಾ ಆಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.