ಉಡುಪಿ ಡಿವೈಎಸ್ಪಿ ವಿರುದ್ಧ ಅಂಬೇಡ್ಕರ್ ಯುವಸೇನೆ ಪ್ರತಿಭಟನೆ

Update: 2024-09-05 15:31 GMT

ಉಡುಪಿ: ಹಲವು ಸಾಧನೆಗಳ ಕಿರೀಟಗಳನ್ನು ತೊಟ್ಟ ಉಡುಪಿ ಜಿಲ್ಲೆಯ ದಲಿತರು ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲ ಗೊಳಿಸುವ ಖಾಕಿ ತೋಳಗಳ ಕಾಟಕ್ಕೆ ಎಂದೂ ಹೆದರಲಾರರು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಗುರುವಾರ ಸಂಜೆ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣವನ್ನು ದುರ್ಬಲ ಪಡಿಸುತ್ತಿದ್ದಾರೆಂದು ಆರೋಪಿಸಿ, ಡಿವೈಎಸ್ಪಿ ಪ್ರಭು ಅವರನ್ನು ಅಮಾನತು ಗೊಳಿಸುವಂತೆ ಆಗ್ರ ಹಿಸಿ ಅಂಬೇಡ್ಕರ್ ಯುವಸೇನೆ ಜಿಲ್ಲಾ ಘಟಕ ಆಯೋಜಿಸಿದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ದೌರ್ಜನ್ಯಕ್ಕೆ ಒಳಗಾದವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ, ಪ್ರಕರಣಕ್ಕೆ ಸಿಸಿಟಿವಿ ದ್ರಶ್ಯಾವಳಿ ಮತ್ತು ಇತರರು ಸಾಕ್ಷಿ ನುಡಿದಿದ್ದರೂ, ನ್ಯಾಯಲಯ ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದರೂ, ಪ್ರಕರಣಕ್ಕೆ ಸರಿ ಯಾದ ಸಾಕ್ಷಾಧಾರವಿಲ್ಲ ಎಂದು ಬಿ.ರಿಪೋರ್ಟ್ ಹಾಕಿರುವುದರ ಹಿಂದೆ ಉಡುಪಿ ಡಿವೈಎಸ್ಪಿ ಪ್ರಭು ಅವರು ಆರೋಪಿ ಗಳಿಂದ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು.

ಒಬ್ಬ ಅನುಸೂಚಿತ ಜಾತಿಗಳ ದೌರ್ಜನ್ಯ ಕಾಯ್ದೆಯ ತನಿಖಾಧಿಕಾರಿಯಾಗಿ ಪ್ರಕರಣಕ್ಕೆ ಪೂರಕವಾದ ಸಾಕ್ಷಿಗಳನ್ನು ಬಲಪಡಿಸಬೇಕಾದ ಪೋಲೀಸ್ ಉಪಾಧೀಕ್ಷಕರೇ ಕರ್ತವ್ಯ ಲೋಪವೆಸಗಿ ಆರೋಪಿಗಳಿಗೆ ನೆರವಾಗುವುದು ನಾಚಿಕೆಗೇಡು ಎಂದರು.

ಅಂಬೇಡ್ಕರ್, ಸಂವಿಧಾನ, ಬುದ್ಧನ ಬಗ್ಗೆ ಮಾತನಾಡುತ್ತಾ ಹಿಂದಿನಿಂದ ದಲಿತರ ಬೆನ್ನಿಗೆ ಚೂರಿ ಹಾಕುವ ಇಂತಹ ಅಧಿಕಾರಿಗಳನ್ನು ಸರಕಾರ ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ರಂಗಕರ್ಮಿ ಉದ್ಯಾವರ ನಾಗೇಶ್‌ಕುಮಾರ್ ಮಾತನಾಡಿ, ದಲಿತರ ಪರ ನ್ಯಾಯವಿದ್ದರೂ ಬೀದಿಯಲ್ಲಿ ನಿಂತು ಪ್ರಜಾ ಪ್ರಭುತ್ವ ರಕ್ಷಕರಿಗೆ ದಿಕ್ಕಾರ ಕೂಗುವ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆರೋಪಿಗಳ ಪರ ಪೊಲೀಸ್ ಉಪಾಧೀಕ್ಷರು ಶಾಮೀಲಾಗಿರವುದು ಖಂಡನಾರ್ಹ ಎಂದರು.

ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು ಮಾತನಾಡಿ ಉಡುಪಿಯ ದಲಿತ ವಿರೋಧಿ ಡಿವೈಎಸ್ಪಿಯನ್ನು ತಕ್ಷಣ ಅಮಾನತುಗೊಳಿಸದಿದ್ದಲ್ಲಿ ಉಗ್ರ ಹೋರಾಟ ಸಂಘಟಿಸುವುದಾಗಿ ಎಚ್ಚರಿಸಿದರು.

ಸಭೆಯನ್ನುದ್ದೇಶಿ ದಲಿತ ಹೋರಾಟಗಾರ್ತಿ ಸುಂದರಿ ಪುತ್ತೂರು, ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ, ಕೃಷ್ಣ ಬಂಗೇರ, ಅನಂತ ನಾಯ್ಕ ಮುಂತಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆಯ ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ರವಿರಾಜ್, ಭಗವಾನ್, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಸತೀಶ್ ಮಂಚಿ, ಸುರೇಶ್ ಚಿಟ್ಪಾಡಿ, ಸಂಧ್ಯಾ ತಿಲಕ್‌ರಾಜ್, ಸರಸ್ವತಿ ಕಿನ್ನಿಮುಲ್ಕಿ, ಅರುಣ್ ಸಲ್ಯಾನ್, ಮೀನಾಕ್ಷಿ ಮಾಧವ ಬನ್ನಂಜೆ, ದೀಪಕ್ ಕೋಟ್ಯಾನ್, ಅಹಮ್ಮದ್ ಉಡುಪಿ, ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯ್ಕ, ಶರತ್ ಶೆಟ್ಟಿ, ಕುಸುಮ ಗುಜ್ಜರಬೆಟ್ಟು ಮುಂತಾದವರು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News