ರಾಜ್ಯಪಾಲರದ್ದು ಪ್ರಜಾಪ್ರಭುತ್ವ ವಿರೋಧಿ ನಡೆ; ಸರಕಾರ ಅಸ್ಥಿರಗೊಳಿಸುವ ಪ್ರಯತ್ನ: ಪ್ರೊ.ಫಣಿರಾಜ್

Update: 2024-08-22 15:18 GMT

ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕೇವಲ ಖಾಸಗಿ ವ್ಯಕ್ತಿಗಳು ನೀಡಿದ ದೂರಿನ ಆಧಾರದಲ್ಲಿ ತರಾತುರಿ ಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಪ್ರಜಾಪ್ರಭುತ್ವ ವಿರೋಧಿ ನಡೆ. ಜನರಿಂದ ಆಯ್ಕೆಯಾದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಇದಾಗಿದೆ ಎಂದು ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರರೂ ಆದ ಸಹಬಾಳ್ವೆ ಸಂಘಟನೆಯ ಸಂಚಾಲಕ ಪ್ರೊ.ಫಣಿರಾಜ್ ಟೀಕಿಸಿದ್ದಾರೆ.

ಮೈಸೂರಿನ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿಗಳ ದೂರಿನ ಅನ್ವಯ ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಉಡುಪಿಯ ಸಹಬಾಳ್ವೆ ಸಂಘಟನೆ ಇಂದು ಸಂಜೆ ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ದೂರು ನೀಡಿದವರು ಪ್ರಾಧಿಕಾರಕ್ಕೆ ದೂರು ನೀಡದೆ ರಾಜ್ಯಪಾಲರಿಗೆ ನೇರ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಯಾವ ಪ್ರಾಧಿಕಾರ ಕೂಡ ಈ ಪ್ರಕರಣದ ತನಿಖೆ ನಡೆಸಿಲ್ಲ, ವರದಿ ಸಲ್ಲಿಸಿ ಪ್ರಾಸಿಕ್ಯೂಷನ್‌ಗೆ ಕೇಳಿಲ್ಲ. ಇದರ ಹೊರತಾಗಿಯೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದವರು ದೂರಿದರು.

ಅಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದವರು ಯಾವ ಕೃತ್ಯಕ್ಕೂ ಹೇಸುವವರಲ್ಲ. ಅದರ ಮುಂದುವರಿದ ಭಾಗವಾಗಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ನೋಡಬಹುದಾಗಿದೆ. ಇಂತಹ ನಿರ್ಣಯ ಗಳನ್ನು ಸಂವಿಧಾನ ಸ್ಥಾನದಲ್ಲಿ ಕುಳಿತು ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಒಳ್ಳೆಯದಲ್ಲ. ಯಾವ ಸರಕಾರ, ವ್ಯಕ್ತಿ ಇದ್ದರೂ ಈ ನಡೆ ಸರಿಯಿಲ್ಲ. ಇದನ್ನು ಖಂಡಿಸಲೇಬೇಕಾಗಿದೆ ಎಂದರು.

ಪ್ರತಿಭಟನೆ ಪ್ರಜಾಪ್ರಭುತ್ವದ ಪರ: ಈ ಪ್ರತಿಭಟನೆ ಆಡಳಿತ ಸರಕಾರದ ಪರವಾಗಿ ಅಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರವಾಗಿಸಲು ನಡೆಯುತ್ತಿರುವ ಹುನ್ನಾರದ ವಿರುದ್ಧವಾಗಿದೆ ಎಂದ ಫಣಿರಾಜ್, 2020ರಲ್ಲಿ ನಡೆದಿದೆ ಎನ್ನಲಾದ ಮುಡಾ ಹಗರಣದ ಕುರಿತು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆ ಸಂದರ್ಭ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯೇ ಆಗಿರಲಿಲ್ಲ. ಅಧಿಕಾರದಲ್ಲಿ ಇಲ್ಲದಾಗ ಹಗರಣ ನಡೆದಿದೆ ಎನ್ನುವುದನ್ನು ರಾಜ್ಯಪಾಲರು ನಂಬುವುದು ಹಾಸ್ಯಾಸ್ಪದ ಎಂದು ಹೇಳಿದರು.

ಈಗ ವಿರೋಧ ಪಕ್ಷದಲ್ಲಿರುವ ಬಿಜೆಪಿಯ ಹಲವಾರು ಮಂದಿ ಅಂದು ಆಡಳಿತ ಪಕ್ಷದ ಭಾಗವಾಗಿದ್ದರು. ಜಿ.ಟಿ ದೇವೇಗೌಡ ಆ ಸಂದರ್ಭ ಮುಡಾದ ಮುಖ್ಯಸ್ಥರಾಗಿದ್ದರು. ಆದರೆ ಪ್ರಸ್ತುತ ಯಾವುದೇ ಆಧಾರವಿಲ್ಲದೇ ವಿರೋಧ ಪಕ್ಷ ಇದರ ಕುರಿತು ಆರೋಪ ಮಾಡುತ್ತಿದೆ ಎಂದರು.

ಖಾಸಗಿ ವ್ಯಕ್ತಿಗಳು ಜು.25ರಂದು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಮನವಿ ಕೊಡುತ್ತಾರೆ. ಒಂದೇ ದಿನದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಗುತ್ತದೆ. ಈ ಹಿಂದೆ ಕೂಡ ರಾಜ್ಯಪಾಲರು ವಿವೇಚನೆ ಬಳಸಿ ನಿರ್ಧಾರ ಕೈಗೊಂಡ ಉದಾಹರಣೆಗಳಿವೆ. ಆದರೆ ಸ್ಪಷ್ಟವಾದ ಆಧಾರ, ಕಾನೂನಾತ್ಮಕ ಪ್ರಕ್ರಿಯೆ ಬಳಸಿ ನಿರ್ಣಯ ಕೈಗೊಳ್ಳುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಹಾಗೆ ನಡೆದಿಲ್ಲ ಎಂದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ವಂ.ವಿಲಿಯಂ ಮಾರ್ಟಿಸ್, ಮಂಜುನಾಥ ಗಿಳಿಯಾರ್, ಬಾಲಕೃಷ್ಮ ಶೆಟ್ಟಿ, ಇದ್ರಿಸ್ ಹೂಡೆ ಸೇರಿದಂತೆ ಹಲವು ಮಾತನಾಡಿ ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಸಭೆಯಲ್ಲಿ ಯಾಸೀನ್ ಮಲ್ಪೆ, ವೆರೋನಿಕಾ ಕರ್ನೇಲಿಯೋ, ಸುಂದರ್ ಮಾಸ್ಟರ್, ಪ್ರಸಾದ್‌ ರಾಜ್ ಕಾಂಚನ್, ಪ್ರಶಾಂತ್ ಜತ್ತನ್, ಅಝೀಝ್ ಉದ್ಯಾವರ, ಅಶ್ಫಾಕ್ ಕಾರ್ಕಳ, ನಾಗೇಶ್ ಕುಮಾರ್ ಉದ್ಯಾವರ, ಇಸ್ಮಾಯಿಲ್ ಕಿದೆವರ್, ಜಾಬೀರ್ ಖತೀಬ್, ಮುಹಮ್ಮದ್ ಗೌಸ್ ಕಾರ್ಕಳ, ಹುಸೇನ್ ಕೋಡಿಬೇಂಗ್ರೆ ಮುಂತಾದವರು ಉಪಸ್ಥಿತರಿದ್ದರು.‌














 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News