ಕರಾವಳಿ ತೀರದ ಭದ್ರತೆ ನಿಶ್ಚಿತವಾಗಿದ್ದರೆ ದೇಶದ ಸಮೃದ್ಧಿ: ವಿಭು ಸಿಂಗ್

ಕುಂದಾಪುರ: ಸಮುದ್ರ ತೀರದಿಂದ ಬರುವ ಉಗ್ರರ ಚಟುವಟಿಕೆ ಸಹಿತ ವಿವಿಧ ಅಪಾಯಗಳ ಬಗ್ಗೆ ಜಾಗೃತಿಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಶೇ.95ರಷ್ಟು ವ್ಯಾಪಾರ ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಹೀಗಾಗಿ ಸಮುದ್ರತೀರದ ಭದ್ರತೆ ನಿಶ್ಚಿತವಾಗಿದ್ದರೆ ದೇಶದ ಸಮೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಕರಾವಳಿ ತೀರ ಭದ್ರತೆಯನ್ನು ಶಾಶ್ವತವಾಗಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿಐಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ವಿಭು ಸಿಂಗ್ ಪ್ರತಿಹಾರ್ ಹೇಳಿದ್ದಾರೆ.
ಸಿಐಎಸ್‌ಎಫ್ ನೇತೃತ್ವದಲ್ಲಿ ‘ಸುರಕ್ಷಿತ ತಟ, ಸಮೃದ್ಧ ಭಾರತ’ ಪರಿಕಲ್ಪನೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುಜರಾತ್‌ನಿಂದ ಕನ್ಯಾಕುಮಾರಿ ತನಕ ಆರಂಭಗೊಂಡಿರುವ ಸೈಕಲ್ ಜಾಥ ’ಕರಾವಳಿ ಸೈಕ್ಲೋಥಾನ್’ ಬುಧವಾರ ಕುಂದಾಪುರಕ್ಕೆ ಆಗಮಿಸಿದ ಬಳಿಕ ಸೇನಾಭಿಮಾನಿ ಬಳಗ ಕುಂದಾಪುರದ ವತಿಯಿಂದ ಇಲ್ಲಿನ ಮೊಗವೀರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಕರಾವಳಿ ಮಾತ್ರವಲ್ಲದೇ ಇತರೆ ಭಾಗಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ತಕ್ಷಣವೇ ಪೋಷಕರು ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ಮುಟ್ಟಿಸಬೇಕು. ಯುವ ಜನತೆ ಯಾವುದೇ ಕಾರಣಕ್ಕೂ ಮಾದಕ ವ್ಯಸನಗಳಿಗೆ ಬಲಿಯಾಗಬಾರದು. ಮಾದಕ ವ್ಯಸನಗಳು ದೇಶದ ಭವಿಷ್ಯವನ್ನೇ ಹಾಳು ಮಾಡುವ ಪಿಡುಗಾಗಿದ್ದು, ದೇಶದ ಭವಿಷ್ಯವಾಗಿರುವ ನೀವೆಲ್ಲರೂ ವ್ಯಸನಗಳ ಹಿಂದೆ ಬೀಳದೆ ಉತ್ತಮ ಸಾಧನೆಗಳನ್ನು ಮಾಡಿದರೆ ಮಾತ್ರ ನಮ್ಮ ದೇಶ ಯಶಸ್ಸಿನ ದೇಶವಾಗಿ ಹೊರಹೊಮ್ಮಲಿದೆ ಎಂದರು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು. ಸಹಾಯಕ ಕಮಾಂಡೆಂಟ್‌ಗಳಾದ ರಾಮಮೂರ್ತಿ ಕೌಂಡಲ್, ಸಾಯಿ ನಾಯಕ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ಚಂದ್ರ, ಡಿವೈಎಸ್ಪಿಎಚ್.ಡಿ.ಕುಲಕರ್ಣಿ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆಯ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ನಗರ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆಯ ಮುಖ್ಯಾಧಿಕಾರಿ ಆನಂದ್ ಜೆ, ಮೊಗವೀರ ಯುವ ಸಂಘಟನೆಯ ಉದಯ್ ಕುಮಾರ್ ಹಟ್ಟಿಯಂಗಡಿ ಉಪಸ್ಥಿತರಿದ್ದರು.
ಸೈಕಲ್ ರ್ಯಾಲಿಯ ಮೂಲಕ ಕುಂದಾಪುರಕ್ಕೆ ಆಗಮಿಸಿದ ಯೋಧರನ್ನು ಕುಂದಾಪುರದ ಸಂಗಮ್ ಜಂಕ್ಷನ್‌ನಲ್ಲಿ ಸ್ವಾಗತಿಸಿಕೊಂಡ ಬಳಿಕ, ಭಂಡಾರ್ಕಾರ್ಸ್ ಹಾಗೂ ಬಿ.ಬಿ.ಹೆಗ್ಡೆ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳು ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಚಂಡೆವಾದ್ಯಗಳ ಭವ್ಯ ಮೆರವಣಿಗೆಯೊಂದಿಗೆ ಚಿಕನ್‌ಸಾಲ್ ರಸ್ತೆಯ ಮಾರ್ಗವಾಗಿ ಮೊಗವೀರ ಭವನಕ್ಕೆ ಬರಮಾಡಿಕೊಂಡರು. ಸೇನಾಭಿಮಾನಿ ಬಳಗದ ರಾಜೇಶ್ ಕಾವೇರಿ ಪ್ರಸ್ತಾಪಿಸಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿನಿ ಸಿಂಧು ನಿರೂಪಿಸಿದರು.
‘ರ್ಯಾಲಿಯಲ್ಲಿ ಸುಮಾರು 125 ಸೈಕ್ಲಿಸ್ಟ್‌ಗಳು ಭಾಗಿಯಾಗಿದ್ದು, ಪಶ್ಚಿಮ ಭಾರತವನ್ನು ಕೇಂದ್ರೀಕರಿಸಿಕೊಂಡು ಗುಜರಾತ್, ದೀಯುದಾಮನ್, ಮಹಾರಾಷ್ಟ್ರ, ಗೋವಾ ಸಂಚರಿಸಿ ಇದೀಗ ಕರ್ನಾಟಕಕ್ಕೆ ಬಂದಿದ್ದೇವೆ. ಇಲ್ಲಿಂದ ಕೇರಳ ಮಾರ್ಗವಾಗಿ ಮಾ.31ರೊಳಗೆ ಕನ್ಯಾಕುಮಾರಿ ತಲುಪಲಿದ್ದೇವೆ. ನಮ್ಮ ಇನ್ನೊಂದು ತಂಡ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ಪುದುಚೇರಿ ಮಾರ್ಗವಾಗಿ ಕನ್ಯಾಕುಮಾರಿಗೆ ಮಾ.31ರಂದು ತಲುಪಲಿದೆ’
-ವಿಭು ಸಿಂಗ್ ಪ್ರತಿಹಾರ್, ಡೆಪ್ಯೂಟಿ ಕಮಾಂಡೆಂಟ್, ಸಿಐಎಸ್‌ಎಫ್