ಉಡುಪಿ: ಮೊದಲ ಗಾಳಿ-ಮಳೆಗೆ 20ಕ್ಕೂ ಅಧಿಕ ಮನೆ, ಬೆಳೆಗೆ ಹಾನಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ಸಂಜೆ ಗುಡುಗು- ಸಿಡಿಲು ಸಹಿತ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 25ರಷ್ಟು ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾದರೆ, ಮೂರು ಪ್ರಕರಣಗಳಲ್ಲಿ ಸುಮಾರು ಐದು ಲಕ್ಷ ರೂ.ಗಳಿಗೂ ಅಧಿಕ ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ವರದಿಗಳು ಬಂದಿವೆ.
ಬುಧವಾರ ಸಂಜೆ ಸಹ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಸುರಿದ ವರದಿಗಳು ಬಂದಿವೆ. ಮಂಗಳವಾರ ಸಂಜೆ ಸುರಿದ ಮಳೆಯಿಂದ ಜಿಲ್ಲೆಯಾದ್ಯಂತ ಸಾಕಷ್ಟು ಹಾನಿ ಸಂಭವಿಸಿದೆ. ಅನೇಕ ಕಡೆಗಳಲ್ಲಿ ವಿದ್ಯುತ್ ಕೈಕೊಟ್ಟು ಜನತೆಗೆ ತೊಂದರೆಯಾಗಿದೆ. ಮಳೆಯಿಂದಾಗಿ ಬಿರುಬೇಸಿಗೆಯ ತಾಪದಿಂದ ಬಳಲಿ ಬೆಂಡಾಗಿದ್ದ ಜನತೆ ಸ್ವಲ್ಪ ಮಟ್ಟಿನ ನೆಮ್ಮದಿ ಪಡುವಂತಾಯಿತು.
ಹೆಬ್ರಿ ತಾಲೂಕಿನಲ್ಲಿ ಅತ್ಯಧಿಕ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದ್ದು, ಅತ್ಯಧಿಕ ಹಾನಿಯೂ ಇದೇ ತಾಲೂಕಿನಿಂದ ವರದಿಯಾಗಿದೆ. ಹೆಬ್ರಿಯ ಸತ್ಯವತಿ, ಗುಣವತಿ, ಶಿವಪ್ರಸನ್ನ ಎಂಬವರ ತೋಟಗಾರಿಕಾ ಬೆಳೆಗಳು ಸಂಪೂರ್ಣ ಹಾನಿಗೊಂಡಿದ್ದು ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ಕಸಬಾದ ಫ್ರಾನ್ಸಿಸ್ ನರೋನ್ಹಾ ಅವರ ತೋಟಗಾರಿಕಾ ಬೆಳೆಗೂ ಹಾನಿಯಾಗಿದ್ದು 50ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಕೆರ್ವಾಶೆಯ ಜಾಣು ಪೂಜಾರಿ ಅವರ ತೋಟಕ್ಕೂ ಅಪಾರ ಹಾನಿ ಸಂಭವಿಸಿದ ವರದಿ ಬಂದಿದೆ.
ಹಾರಿಹೋದ ಶಾಲೆ ಹೆಂಚು:
ಸಂಜೆ ಬಲವಾಗಿ ಬೀಸಿದ ಗಾಳಿಗೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಕಲ್ಲಗುಪ್ಪೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಂಚು ಹಾರಿಹೋಗಿದೆ. ಹೆಬ್ರಿಯ ಸುಶೀಲ ಆಚಾರ್ತಿ ಎಂಬವರ ದನದ ಕೊಟ್ಟಿಗೆಯೂ ಗಾಳಿಮಳೆಯಿಂದ ಹಾನಿಗೊಂಡಿದ್ದು 10 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
23 ಮನೆಗಳಿಗೆ ಹಾನಿ:
ನಿನ್ನೆಯ ಮಳೆಗೆ ಜಿಲ್ಲೆಯ ಒಟ್ಟು 23 ಮನೆಗಳಿಗೆ ಸಾಧಾರಣದಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನಲ್ಲಿ ನಾಲ್ಕು, ಬ್ರಹ್ಮಾವರ ತಾಲೂಕಿನಲ್ಲಿ ಮೂರು, ಉಡುಪಿಯಲ್ಲಿ ಒಂದು, ಕಾರ್ಕಳ ತಾಲೂಕಿನಲ್ಲಿ 14 ಹಾಗೂ ಹೆಬ್ರಿ ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ. ಇದರಿಂದ ಆರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ಕೆರಾಡಿಯ ಗುಲಾವಿ ಭೋವಿ ಎಂಬವರ ಮನೆಗೆ 30ಸಾವಿರ, ಸವಿತಾ ನಾಯ್ಕರ ಮನೆಗೆ 40ಸಾವಿರ, ಉಡುಪಿ ಕುಕ್ಕೆಹಳ್ಳಿಯ ಶಂಕರ್ ಎಂಬವರ ಮನೆಗೆ 70 ಸಾವಿರ, ಕಾರ್ಕಳ ಕಸಬಾದ ಜಯರಾವ್ ಎಂಬವರ ಮನೆಗೆ 50 ಸಾವಿರ ರೂ., ಮುಡಾರು ಗ್ರಾಮದ ಹರೀಶ್ ಶೆಟ್ಟಿ, ಮಹಾಬಲ ಪೂಜಾರಿ ಮನೆಗೆ ತಲಾ 40 ಸಾವಿರ ರೂ., ದುರ್ಗಾ ಗ್ರಾಮದ ಫ್ರಾನ್ಸಿಸ್ ಡಿಮೆಲ್ಲೊ ಮನೆಗೆ 50ಸಾವಿರ ರೂ., ಸೀತಾ ಹೆಗ್ಡೆ ಮನೆಗೆ 25 ಸಾವಿರ ರೂ.ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ 3.4ಮಿ.ಮೀ. ಮಳೆಯಾದ ವರದಿ ಬಂದಿದೆ. ಹೆಬ್ರಿಯಲ್ಲಿ ಅತ್ಯಧಿಕ 7.1ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 5.9, ಕಾರ್ಕಳದಲ್ಲಿ 3.6, ಬೈಂದೂರಿನಲ್ಲಿ 3.0, ಕುಂದಾಪುರದಲ್ಲಿ 2.0, ಉಡುಪಿ ಹಾಗೂ ಕಾಪುವಿನಲ್ಲಿ ತಲಾ 0.8ಮಿ.ಮೀ. ಮಳೆಯಾದ ಬಗ್ಗೆ ಮಾಹಿತಿ ಬಂದಿದೆ.
