ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮದ ಘೋಷಣೆ: 4ನೇ ವಿಶ್ವ ಬಂಟರ ಸಮ್ಮೇಳನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಉಡುಪಿ: ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಂಟ ಸಮುದಾಯದ ಅಭಿವೃದ್ಧಿಗಾಗಿ ಮುಂದಿನ ಬಜೆಟ್ ನಲ್ಲಿ ‘ಬಂಟರ ಅಭಿವೃದ್ಧಿ ನಿಗಮ’ದ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟ ಸಮಾಜಕ್ಕೆ ಭರವಸೆ ನೀಡಿದ್ದಾರೆ.
ನಗರದ ಅಜ್ಜರಕಾಡು ಕ್ರೀಡಾಂಗಣದ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆದ ನಾಲ್ಕನೇ ವಿಶ್ವ ಬಂಟರ ಸಮ್ಮೇಳನ-2023ನ್ನು ದೀಪ ಪ್ರಜ್ವಲನಗೊಳಿಸಿ, ಪಿಂಗಾರವನ್ನು ಅರಳಿಸಿ, ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬಂಟ ಸಮಾಜದ ಅಭಿವೃದ್ಧಿಗಾಗಿ ಕಳೆದ ನಮ್ಮ ಚುನಾವಣಾ ಪ್ರಣಾಳಿಕೆ ಯಲ್ಲೇ ಬಂಟರ ಅಭಿವೃದ್ಧಿ ನಿಗಮ ಪ್ರಾರಂಭಿ ಸುವ ಘೋಷಣೆ ಮಾಡಿದ್ದೆವು. ಮುಂದಿನ ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡುತ್ತೇವೆ ಎಂದರು.
ರಾಜಕೀಯ, ಕಲೆ, ಕ್ರೀಡೆ, ಸಿನಿಮಾ, ಸಾಹಿತ್ಯ, ಹೊಟೇಲ್, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಂಟ ಸಮಾಜ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಮಾತನಾಡಿದ ಮುಖ್ಯಮಂತ್ರಿಗಳು, ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ಅದೇ ರೀತಿ ವಿಶ್ವ ಮಾನವ ಸಂಸ್ಕೃತಿಯನ್ನು ಬಂಟ ಸಮುದಾಯ ಆಚರಿಸುತ್ತಿದೆ ಎಂದು ನುಡಿದರು.
ಬಂಟರದು ಜಾತ್ಯತೀತ ಸಮಾಜ. ಯಾರ ಬಗ್ಗೆಯೂ ತಾರತಮ್ಯ ಮಾಡದೇ, ಎಲ್ಲರನ್ನೂ ಮನುಷ್ಯರನ್ನಾಗಿ ಬಂಟ ಸಮಾಜ ನೋಡುತ್ತದೆ. ನಾವು ಮನುಷ್ಯರಾಗಿ ಬಾಳಬೇಕು, ಪ್ರೀತಿಸಬೇಕು, ಗೌರವಿಸಬೇಕು ಹೊರತು, ಮನುಷ್ಯರನ್ನು ದ್ವೇಷಿಸುವ ಪ್ರವೃತ್ತಿ ಸಲ್ಲದು. ಬದುಕಿನಲ್ಲಿ ಮಾನವೀಯತೆ ಮುಖ್ಯ, ಬದುಕು ನಂತರ. ಮನುಷ್ಯತ್ವವೇ ಎಲ್ಲರಲ್ಲೂ ಇರಬೇಕು ಎಂದರು.
ಬಂಟ ಸಮಯದಾಯ ವಿಶಿಷ್ಟ ಪರಂಪರೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಸಮಾಜ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಶಿಕ್ಷಣ, ಉದ್ಯಮ, ಕ್ರೀಡೆ, ಸಿನೆಮಾ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಾಜ ತನ್ನ ಛಾಪನ್ನು ಮೂಡಿಸಿದೆ. ಬಂಟರು ವಿಶ್ವದ ಯಾವುದೇ ಭಾಗದಲ್ಲಿದ್ದರೂ ಕರಾವಳಿಯ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮರೆತಿಲ್ಲ. ಅದೇ ಇವರ ಹೆಚ್ಚುಗಾರಿಕೆ ಎಂದು ಪ್ರಶಂಸಿಸಿದರು.
ಕರಾವಳಿಯ ಉಳಿದ ಸಮಾಜದಂತೆ ಬಂಟರೂ ಸಾಹಸಿಗರು. ವಿಶ್ವದ ಎಲ್ಲಾ ಕಡೆಗಳಲ್ಲೂ ಹರಡಿರುವ ಇವರು, ತಾವು ಹೋಗುವ ವಿಶ್ವದ ಎಲ್ಲಾ ಕಡೆ ಎಲ್ಲರ ಜೊತೆಗೂ ಸಹೃದಯತೆಯಿಂದ ಬೆರೆಯುತ್ತಾರೆ. ಇದು ಬಂಟ ಸಮುದಾಯದ ಹೆಗ್ಗಳಿಕೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ. ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕಲೆ, ಕ್ರೀಡೆ, ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟರ ಸಮುದಾಯದವರನ್ನು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಸಮುದಾಯದ ಹಲವು ಮಂದಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.
ಬಂಟ ಸಮುದಾಯ ಹೃದಯ ಶ್ರೀಮಂತಿಕೆಯ ಸಮಾಜ. ತಾವು ಬೆಳೆಯುತ್ತಾ ಇತರ ಸಮಾಜದವರನ್ನು ಒಟ್ಟಿಗೆ ಕರೆದೊಯ್ಯುತ್ತಾರೆ. ವಿಶ್ವ ಬಂಟರ ಸಮ್ಮೇಳನ ಯಶಸ್ವಿಯಾಗಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾರೈಸಿದರು.
ವಿಧಾನಸಭೆಯ ಸಭಾದ್ಯಕ್ಷ ಯು.ಟಿ.ಖಾದರ್ ಅವರು ಮಾತನಾಡಿ ಬಂಟರ ಸಮಾಜದ ಪ್ರೀತಿ, ವಿಶ್ವಾಸವನ್ನು ನಾನು ಕಂಡಿದ್ದೇನೆ. ಎಲ್ಲಾ ಸಮಾಜವನ್ನು ಸಮಾನತೆಯಿಂದ ಕಾಣುವ ಈ ಸಮುದಾಯದ ಯುವ ಜನಾಂಗ ಇದೇ ಪರಂಪರೆ ಯನ್ನು ಮುಂದುವರಿಸುವಂತಾಗಬೇಕು. ವಿಶ್ವಾಸಭರಿತ, ಬಲಿಷ್ಠ ಸಮಾಜ ನಿರ್ಮಾಣದ ಗುರಿ ಎಲ್ಲರದಾಗಬೇಕು ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಲ್ಲದೇ ಮುಖ್ಯ ಮಂತ್ರಿಗಳು ಸಮಾಜದ ಗಣ್ಯರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಗಣೇಶ್ ಹುಕ್ಕೇರಿ, ಅಶೋಕಕುಮಾರ್ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು. ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಐವನ್ ಡಿ ಸೋಜ, ಜಿ.ಎ.ಬಾವ, ವಿವಿಧ ಬಂಟ ಸಂಘಟನೆಗಳ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕೆ.ಪ್ರಕಾಶ್ ಶೆಟ್ಟಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಡಾ.ಪಿ.ವಿ.ಶೆಟ್ಟಿ, ಬಾರಕೂರು ಮಹಾ ಸಂಸ್ಥಾನದ ವಿಶ್ವ ಸಂತೋಷ್ ಭಾರತಿ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.
ಎಂಚ ಉಲ್ಲಾರ್...
‘ನಿಕಲೆಗ್ ನನ ನಮಸ್ಕಾರ.. ಎಂಚ ಉಲ್ಲಾರ್...’ ಎಂದು ತುಳುವಿನಲ್ಲೇ ಮಾತು ಪ್ರಾರಂಭಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ನನಗೆ ತುಳು ಬರುವುದಿಲ್ಲ, ಬರೆದುಕೊಟ್ಟಿದ್ದನ್ನು ಹೇಳುತಿದ್ದೇನೆ ಎಂದೂ ಸೇರಿಸಿದರೂ ಸೇರಿದ ಭಾರೀ ಸಂಖ್ಯೆಯ ಬಂಟರು ಖುಷಿಗೊಂಡಂತ್ತಿತ್ತು. ಇಬ್ಬರು ತುಳುವರು ಸೇರಿದಾಗ ತುಳುವಿನಲ್ಲೇ ಮಾತನಾಡುತ್ತಾರೆ, ಕನ್ನಡದ ನಮಗೆ ಅದು ಅರ್ಥವೇ ಆಗುವುದಿಲ್ಲ ಎಂದೂ ನಗೆಯ ನಡುವೆ ಹೇಳಿದರು.
ಅರ್ಧ ಭಾಷಣವನ್ನು ಬಂಟ ಸಮುದಾಯದ ಪ್ರಶಂಸನೆಗೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳನ್ನು ವಿವರಿಸಲು ಬಳಸಿಕೊಂಡ ಸಿಎಂ, ಕೊನೆಯಲ್ಲಿ ಅವರ ಬಹುಕಾಲದ ಕೋರಿಕೆಯಾದ ಬಂಟರ ಅಭಿವೃದ್ಧಿ ನಿಗಮವನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸುವ ಭರವಸೆ ನೀಡಿದರು.
ಉಡುಪಿ-ಮಂಗಳೂರು ಜಿಲ್ಲೆಗಳ ಜನರು, ಬಂಟರು ಸಾಹಸಿಗರು ಎಂದ ಅವರು, ಮನುಷ್ಯ ಧ್ವೇಷವನ್ನು ಬಂಟ ಸಮಾಜ ಎಂದೂ ಬೆಂಬಲಿಸುವುದಿಲ್ಲ ಎಂದರು. ವಿಶ್ವ ಮಾನವ ಸಂಸ್ಕೃತಿಯನ್ನು ಬಂಟ ಸಮಾಜ ಆಚರಿಸುತ್ತದೆ ಎಂದರು.