ಹೆರಿಗೆ ವೇಳೆ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ
ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ಹೆರಿಗೆ ವೇಳೆ ಮಗುವೊಂದು ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಸಾರ್ವಜನಿಕರು ಸಂಜೆ ವೇಳೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ನ.17ರಂದು ರಾತ್ರಿ ವೇಳೆಗೆ ಗಂಗೊಳ್ಳಿಯ ಗುಡ್ಡದಕೇರಿಯ ದಾವನಮನೆ ಶ್ರೀನಿವಾಸ ಖಾರ್ವಿ ಎಂಬವರ ಪತ್ನಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಬೆಳಗ್ಗೆ ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ನೀಡಿದರು. ವೈದ್ಯರ ನಿರ್ಲಕ್ಷ್ಯ ದಿಂದಲೇ ಮಗು ಮೃತಪಟ್ಟಿದೆ ಎಂದು ಮನೆಯವರು ಹಾಗೂ ಗ್ರಾಮಸ್ಥರು ಆರೋಪಿಸಿದರು.
ನಿರ್ಲಕ್ಷ್ಯ ವಹಿಸಿದ ವೈದ್ಯರನ್ನು ಕೂಡಲೇ ಅಮಾನತು ಮಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳದಲ್ಲೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರು ವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು.
ಸಂಜೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಭೇಟಿ ನೀಡಿ ಪ್ರತಿಭಟನ ಕಾರರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪವಿಭಾಗ ಆಸ್ಪತ್ರೆಯ ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿ ಕಾರಿ ಡಾ.ರಾಬರ್ಟ್ ರೆಬೆಲ್ಲೋ ಹಾಜರಿದ್ದರು.
ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ನಂದಕುಮಾರ್, ಎಸ್ಸೈ ಪ್ರಸಾದ್, ಸಂಚಾರ ಠಾಣೆ ಎಸ್ಸೈ ಸುಬ್ಬಣ್ಣ ನೇತೃತ್ವದಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.