ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು: ಯಡಿಯೂರಪ್ಪ ವಿಶ್ವಾಸ

Update: 2024-05-03 10:18 GMT

ಬೈಂದೂರಿನಲ್ಲಿ ಬಿಜೆಪಿ ರೋಡ್ ಶೋಗೆ ಚಾಲನೆ

ಬೈಂದೂರು, ಮೇ 3: ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಹಾಗೆಯೇ ನರೇಂದ್ರ ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನ ಮಂತ್ರಿಯಾಗುವುದು ಅಷ್ಟೇ ಸತ್ಯ. ದೇಶದಲ್ಲಿ ಬಿಜೆಪಿ 400ಕ್ಕೂ ಅಧಿಕ ಸೀಟ್ ಗೆಲ್ಲಲಿದೆ. ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಬೈಂದೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೋಡ್ ಶೋಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಬಿಜೆಪಿ ಅಲೆ, ಮೋದಿ ಅಲೆ ಎದ್ದಿದೆ. ಶಿವಮೊಗ್ಗ ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ ಕನಿಷ್ಠ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ಬರಲಿದೆ. ರಾಹುಲ್ ಗಾಂಧಿ ಪ್ರವಾಸದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮಾತನಾಡಿ, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಅಮಿತ್ ಶಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದ ತನಿಖೆಗೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಬಿಜೆಪಿ ತನ್ನದೇ ದಾರಿಯಲ್ಲಿ ಹೋಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನವರು ಹತಾಶೆಯಿಂದ ರಾಹುಲ್ ಗಾಂಧಿಯವರನ್ನು ಶಿವಮೊಗ್ಗಕ್ಕೆ ಕರೆಸಿದ್ದಾರೆ. ಸಮಾರಂಭದಲ್ಲಿ ಏನೇನಾಗಿದೆ ಎಂಬುದು ಮತ್ತು ಕಾಂಗ್ರೆಸ್ ಎಷ್ಟು ಅಸಂಘಟಿತವಾಗಿದೆ ಎಂಬುದು ತಿಳಿಯುತ್ತದೆ. ಮತದಾರರು ಬಿಜೆಪಿ ಜತೆಗೆ ಇದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ನಿಂದ ಯಾರೇ ಪ್ರಚಾರ ಮಾಡಲಿ. ನಾವಂತೂ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಷ್ಟೇ ಪರಿಣಾಮಕಾರಿಯಾಗಿ ಪ್ರಚಾರ ನಡೆಸುತ್ತಿದ್ದೇವೆ. ದೇಶ ಮತ್ತು ಸ್ವಾಭಿಮಾನದಿಂದ ಇಲ್ಲಿನ ಜನರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.

ಬೈಂದೂರಿನಿಂದ ಆರಂಭಗೊಂಡ ರೋಡ್ ಶೋ, ಉಪ್ಪುಂದವರೆಗೆ ನಡೆಯಿತು. ಶಾಸಕರಾದ ಗುರುರಾಜ ಗಂಟಿಹೊಳೆ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕಿಶೋರ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ನಟಿ ತಾರಾ, ಬ್ರಿಜೇಶ್ ಚೌಟ, ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

‘ದಕ್ಷಿಣ ಭಾರತದಲ್ಲಿ ಟೆಂಪಲ್ ಕಾರಿಡಾರ್’

ದಕ್ಷಿಣ ಭಾರತದಲ್ಲಿ ಟೆಂಪಲ್ ಕಾರಿಡಾರ್ ಗೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಕಾಶೀ-ವಾರಣಾಸಿ, ಉಜ್ಜನಿ, ಅಯೋಧ್ಯೆ ಕಾರಿಡಾರ್ ಆಗಿದೆ. ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ ತಿರು ಅಣ್ಣಾಮಲೈ ಕಾರಿಡಾರ್ ಮಾಡುವುದಾಗಿ ನಾವು ಹೇಳಿದ್ದೇವೆ. ಕರ್ನಾಟಕದಲ್ಲಿ ಮೂಕಾಂಬಿಕಾ ಕಾರಿಡಾರ್ ಮಾಡುವ ಸಮಯ ಬಂದಿದೆ ಎಂದು ಅಣ್ಣಾಮಲೈ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಇಲ್ಲಿಗೆ ಕರೆದುಕೊಂಡು ಬಂದು, ದೇವಿಯ ದರ್ಶನ ಪಡೆಯಲಿದ್ದಾರೆ. ಕೊಲ್ಲೂರಿನಲ್ಲಿ ಮೂಕಾಂಬಿಕಾ ಕಾರಿಡಾರ್ ಆಗಿಯೇ ಆಗಲಿದೆ. ಈ ಬಗ್ಗೆ ಸ್ಪಷ್ಟ ರೂಪುರೇಷೆ ನಮ್ಮ ಬಳಿಯಿದೆ. ಇದರಿಂದ ಬೈಂದೂರು ಮತ್ತು ಕೊಲ್ಲೂರು ಕ್ಷೇತ್ರ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News