ಬೂಸಾ ಚಳುವಳಿಯಿಂದ ದಲಿತರಲ್ಲಿ ಜಾಗೃತಿ: ಜಯನ್ ಮಲ್ಪೆ

Update: 2023-11-21 10:28 GMT

ಮಲ್ಪೆ, ನ.21: ದಲಿತರಲ್ಲಿ ಆತ್ಮಾಭಿಮಾನದ ಸಂಕೇತವಾಗಿದ್ದ ಬಿ.ಬಸವ ಲಿಂಗಪ್ಪ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತ, ಕಾಲೇಜು ವಿದ್ಯಾರ್ಥಿಗಳು ಓದುವ ಸಾಹಿತ್ಯ ಬೂಸಾ ದನಗಳ ಮೇವು ಇದ್ದಂತೆ ಎಂದು ಹೇಳಿದ್ದರು. ಅವರ ಭಾಷಣದ ವಿರುದ್ಧ ಪಟ್ಟಭದ್ರ ಹಿತಾಶಕ್ತಿಗಳು ರಾಜ್ಯದಾದ್ಯಂತ ವ್ಯವಸ್ಥಿತ ಚಳುವಳಿಯನ್ನು ನಡೆಸಿದವು. ಇದರಿಂದಾಗಿಯೇ ರಾಜ್ಯದಲ್ಲಿ ದಲಿತರು ಜಾಗೃತರಾದರು ಎಂದು ದಸಂಸ ರಾಜ್ಯ ಸಮಿತಿ ಸದಸ್ಯ ಮತ್ತು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ಮಂಗಳವಾರ ಆದಿ ಉಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿರುವ ಬೂಸಾ ಚಳುವಳಿಯ ಅರ್ಧ ಶತಮಾನ ಸಮಾವೇಶದ ಕರಪತ್ರ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕರಪತ್ರ ಬಿಡುಗಡೆಗೊಳಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಬಿ.ಬಸವಲಿಂಗಪ್ಪನವರ ಬೂಸಾ ಪ್ರಕರಣ ರಾಜ್ಯದಲ್ಲಿ ದಲಿತರು ಸಂಘಟಿತರಾಗಲು ಕಾರಣವಾಯಿತು. ಈ ಚಳುವಳಿಯಿಂದಲೇ ದಲಿತ ಲೇಖಕ ಕಲಾವಿದರ ಒಕ್ಕೂಟದಿಂದ ದಲಿತ ಸಂಘರ್ಷ ಸಮಿತಿಯಾಗಿ ಕನ್ನಡ ನಾಡಿನ ಬಡವರಲ್ಲಿ ಚಳುವಳಿಯ ಸ್ಪೂರ್ತಿ ತುಂಬಿ ತಮ್ಮ ಹಕ್ಕುಗಳಿಗೆ ಹೋರಾಟದ ಸ್ವರೂಪ ನೀಡಿತು ಎಂದರು.

ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಹಿರಿಯ ದಲಿತ ಮುಖಂಡ ವಿಠಲ ಬಿಎಸ್‌ಎನ್‌ಎಲ್ ಕೊಡಂಕೂರು ಮುಖ್ಯ ಅತಿಥಿಗಳಾಗಿದ್ದರು.

ದಲಿತ ನಾಯಕರಾದ ಗಣೇಶ್ ನೆರ್ಗಿ, ಸಂತೋಷ್ ಕಪ್ಪೆಟ್ಟು, ದಯಾಕರ್ ಮಲ್ಪೆ, ರವಿರಾಜ್ ಲಕ್ಷ್ಮೀನಗರ, ಕೃಷ್ಣ ಶ್ರೀಯಾನ್ ಮಲ್ಪೆ, ವಿನಯ ಕೊಡಂಕೂರು, ಮುಗ್ಗೇಶ್, ದೀಪಕ್ ಕೊಡವೂರು, ವಸಂತ ಅಂಬಲಪಾಡಿ, ಮಲ್ಲೇಶ್, ನವೀನ್ ಬನ್ನಂಜೆ, ಸುಶೀಲ್ ಕುಮಾರ್ ಕೊಡವೂರು, ಸುರೇಶ್ ಚಿಟ್ಪಾಡಿ, ಚೌಡೇಶ್, ಅರುಣ್ ಸಾಲ್ಯಾನ್, ಸುಪುತ್ರ, ದೀಪಕ್ ಮಲ್ಪೆ, ಅನಿಲ್ ಕದಿಕೆ ಉಪಸ್ಥಿತರಿದ್ದರು. ಭಗವನ್ ಮಲ್ಪೆ ಸ್ವಾಗತಿಸಿದರು. ಪ್ರಸಾದ್ ನೆರ್ಗಿ ವಂದಿಸಿದರು.  

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News