ಉಡುಪಿ ಜಿಲ್ಲೆಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಗೆ ಮುಂದಾಗಿ: ಯುವ ಜನತೆಗೆ ಸಂಸದ ಕೋಟ ಕರೆ

Update: 2024-12-23 13:50 GMT

ಉಡುಪಿ, ಡಿ.23: ದೇಶದ ಸಂಸ್ಕರಿಸಿದ ಆಹಾರ ಪದಾರ್ಥಗಳ ಬೇಡಿಕೆಗಳನ್ನು ಹೆಚ್ಚಿಸುವುದು, ಈ ನಿಟ್ಟಿನಲ್ಲಿ ರೈತರನ್ನು ಉದ್ಯಮಿಗಳಾಗಿ ಮಾಡಿ ಅವರ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಸಂಸ್ಕರಿಸಿ ದೇಶ-ವಿದೇಶಗಳಿಗೆ ಅವುಗಳನ್ನು ರಫ್ತು ಮಾಡುವ ಉದ್ದೇಶದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಡಿ ಕಿರು ಉದ್ಯಮ ಸ್ಥಾಪಿಸಲು ಆಸಕ್ತ ರೈತರು ಹಾಗೂ ಜಿಲ್ಲೆಯ ಯುವ ಉದ್ದಿಮೆದಾರರು ಮುಂದೆ ಬರಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ರೈತರ ದಿನಾ ಚರಣೆ ಪ್ರಯುಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ, ಯೋಜನೆಯ ಮಾಹಿತಿ ಕಾರ್ಯಾಗಾರ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಆಹಾರ ಸಂಸ್ಕರಣಾ ಉದ್ದಿಮೆ ಬಲಪಡಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸುವು ದರೊಂದಿಗೆ ಜಿಲ್ಲೆಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ನಿರುದ್ಯೋಗ ನಿವಾರಣೆ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಗೊಳಿಸುವಿಕೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಪಿಎಂ ಕಿರು ಆಹಾರ ಸಂಸ್ಕರಣಾ ಘಟಕ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಆಶಯದಡಿ ದೇಶಾದ್ಯಂತ ಜಾರಿ ಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕಾ ಉತ್ಪನ್ನಗಳಿಗೆ ಆದ್ಯತೆಯಲ್ಲಿ ಹಾಗೂ ಇತರ ಉತ್ಪನ್ನಗಳಿಗೂ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದವರು ಹೇಳಿದರು.

ನಿಜವಾಗಿಯೂ ಶ್ರಮವಹಿಸಿ ದುಡಿಯುವವರಿಗೆ ಈ ಯೋಜನೆಯು ಶಕ್ತಿಯಾಗಲಿದೆ. ಯೋಜನೆಯಡಿ ಸುಮಾರು ಎರಡು ಲಕ್ಷ ಉದ್ದಿಮೆದಾರ ರನ್ನು ಹೊಸದಾಗಿ ಸೆಳೆಯುವ ಗುರಿಯೊಂದಿಗೆ 10,000ಕೋಟಿ ರೂ.ಗಳನ್ನು ಇದಕ್ಕಾಗಿ ಕೇಂದ್ರ ಸರಕಾರ ಮೀಸಲಿರಿಸಿದೆ. ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಮಂದಿ ಆಸಕ್ತ ಉದ್ದಿಮೆದಾರರಿಗೆ ಅರ್ಜಿ ಮಂಜೂರಾಗಿದೆ ಎಂದೂ ಕೋಟ ತಿಳಿಸಿದರು.

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುಕೆ ಯೋಜನೆಯ ಸಹಾಯಧನವನ್ನು ಪಡೆಯಲು ಸರಕಾರದ ಯಾವುದೇ ಇಲಾಖೆಗೂ ಅರ್ಜಿ ಹಾಕಿ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದ್ದು, ಅವರುಗಳು ಅರ್ಜಿದಾರರಿಗೆ ಬ್ಯಾಂಕ್‌ನಿಂದ ಸಾಲ ದೊರಕುವಂತೆ ಮಾಡುವುದರೊಂದಿಗೆ ಸಹಾಯಧನ ಲಭಿಸುವವರೆಗೂ ಸಹಕಾರ ನೀಡಲಿದ್ದಾರೆ ಎಂದರು.

ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರೈತ ನಮ್ಮ ದೇಶದ ಬೆನ್ನೆಲುಬು. ರೈತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಿದಾಗ ಮಾತ್ರ ನಿಗದಿತ ಗುರಿ ಸಾಧಿಸಿ ಯೋಜನೆಗಳು ಯಶಸ್ವಿಗೊಳ್ಳಲು ಸಾಧ್ಯ ಎಂದರು.

ಬೆಂಗಳೂರಿನ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಕೆ ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿ ಯೋಜನೆಯಡಿ ಹೊಸ ಸಂಸ್ಕರಣಾ ಉದ್ದಿಮೆ ಸ್ಥಾಪಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ದಿಮೆಯನ್ನು ವಿಸ್ತರಿಸಲು ಅವಕಾಶವಿದೆ. ಇದಕ್ಕೆ ವಯಸ್ಸಿನ ಮಿತಿ ಹಾಗೂ ಕನಿಷ್ಠ ವಿದ್ಯಾರ್ಹತೆ ಎಂಬುದಿಲ್ಲ. ಯೋಜನಾ ವೆಚ್ಚದ ಶೇ.35ನ್ನು ಕೇಂದ್ರ ಸರಕಾರ (ಶೇ.60) ಹಾಗೂ ರಾಜ್ಯ ಸರಕಾರ (ಶೇ.40)ಗಳು ಸಹಾಯಧನ ರೂಪದಲ್ಲಿ ಭರಿಸಲಿವೆ. ಇದರೊಂದಿಗೆ ರಾಜ್ಯ ಸರಕಾರ ಹೆಚ್ಚುವರಿಯಾಗಿ ಶೇ.15ರಷ್ಟು ನೀಡಲಿರುವು ದರಿಂದ ಒಟ್ಟಾರೆ ಸಹಾಯಧನ ಶೇ.50 ಆಗಿರಲಿದೆ ಎಂದರು.

ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣ, ತುಂತುರು ನೀರಾವರಿ ಘಟಕದ ಮಂಜೂರಾತ್ರಿ ಪತ್ರ, ಪಿ.ಎಂ.ಎಫ್.ಎಂ.ಇ ಯೋಜನೆಯ ಸಾಲ ಮಂಜೂರಾತಿ ಪತ್ರ, ಮಣ್ಣು ಆರೋಗ್ಯ ಚೀಟಿ, ಸಮಗ್ರ ಕೃಷಿ ಪದ್ಧತಿ ಮಂಜೂ ರಾತಿ ಪತ್ರವನ್ನು ವಿತರಿಸಲಾಯಿತು. ರೈತ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಆಯ್ದ 9ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಎಸ್.ಪಿ.ಹೆಗಡೆ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾದೇವಿ ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ ಸ್ವಾಗತಿಸಿದರೆ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ್ ವಂದಿಸಿದರು.





 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News