ಬ್ರಹ್ಮಾವರ: ವೃದ್ಧ ದಂಪತಿಗೆ 84 ಲಕ್ಷ ರೂ. ವಂಚನೆ; ಇಬ್ಬರ ವಿರುದ್ಧ ಪ್ರಕರಣ ದಾಖಲು

Update: 2023-12-14 16:37 GMT

ಬ್ರಹ್ಮಾವರ, ಡಿ.14: ಸ್ನೇಹಿತರಂತೆ ನಟಿಸಿದ ಜೋಡಿಯೊಂದು ವೃದ್ಧ ದಂಪತಿಗೆ ನಯವಾದ ಮಾತು ಮತ್ತು ವರ್ತನೆಯಿಂದ 84 ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರಕೂರು ಸಮೀಪ ಹನೇಹಳ್ಳಿ ಗ್ರಾಮದ ದೀನನಾಥ (73) ಮತ್ತು ಅವರ ಪತ್ನಿ ಕಲ್ಯಾಣಿ ವಂಚನೆಗೊಳಗಾದವರು.

ಕೃಷ್ಣ ಯಾನೆ ಕಿಶೋರ ಹಾಗೂ ಆತನ ಸ್ನೇಹಿತೆ ಶಶಿಕಲಾ ವೃದ್ಧ ದಂಪತಿಗಳಿಗೆ ವಂಚಿಸಿದ ಆರೋಪಿಗಳಾಗಿದ್ದಾರೆ.

ದೀನನಾಥರನ್ನು ಪರಿಚಯ ಮಾಡಿಕೊಂಡ ಮೊದಲ ಆರೋಪಿ ಕೃಷ್ಣ ಯಾನೆ ಕಿಶೋರ, ಅವರ ಬಳಿ ಇರುವ ಸಂಪತ್ತನ್ನು ಅರಿತು ಅದನ್ನು ಲಪಟಾಯಿಸುವ ಉದ್ದೇಶದಿಂದ ಅತ್ಮೀಯನಂತೆ ನಟಿಸಿ, ಆತನ ಪತ್ನಿಗೆ ಕ್ಯಾನ್ಸರ್ ಕಾಯಿಲೆಯಿದೆ ಆಸ್ಪತ್ರೆಗೆ ಹಣಬೇಕು, ದೇವಸ್ಥಾನ ಕಟ್ಟಲು ಹಣಬೇಕು ಹೀಗೆ ಬೇರೆ ಬೇರೆ ನೆಪ ಹೇಳಿ, ಮೋಸದಿಂದ ನಂಬಿಸಿ 2022ರ ಮೇ 26ರಿಂದ ಡಿ.12ರವರೆಗೆ ಬೇರೆ ಬೇರೆ ದಿನಾಂಕಗಳಲ್ಲಿ ಒಟ್ಟು 69,50,000ರೂ. ಹಣವನ್ನು ಲಪಟಾಯಿಸಿದಲ್ಲದೇ, 1ನೇ ಆರೋಪಿಯ ಸ್ನೇಹಿತೆ ಎಂದು ಹೇಳಿ 2ನೇ ಆರೋಪಿತೆ ಶಶಿಕಲಾ ದೀನನಾಥರ ಪತ್ನಿ ಕಲ್ಯಾಣಿಯವರಿಂದ ಜನರಲ್ ಪವರ್ ಆಫ್ ಅಟಾರ್ನಿಯನ್ನು ಮೋಸದಿಂದ ಅವರ ಹೆಸರಿಗೆ ಬರೆಸಿಕೊಂಡು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಹೊನ್ನಾಳ ಶಾಖೆಯಲ್ಲಿ ಅವರ ಮನೆಯನ್ನು ಅಡಮಾನ ಇರಿಸಿ 15 ಲಕ್ಷ ರೂ. ಸಾಲವನ್ನು ತಮ್ಮ ಸ್ವಂತಕ್ಕಾಗಿ ತೆಗೆದುಕೊಂಡಿದ್ದರು.

ಒಟ್ಟಾರೆಯಾಗಿ ಆರೋಪಿಗಳಿಬ್ಬರು ಸೇರಿ ಒಟ್ಟು 84,50,000 ರೂ. ಹಣವನ್ನು ದೀನನಾಥರಿಂದ ಮೋಸದಿಂದ ಲಪಟಾಯಿಸಿದ್ದರು. ಅಲ್ಲದೇ ಅವರು ಸಹಿ ಮಾಡಿದ ಚೆಕ್ ಬುಕ್, ಮನೆಯ ಟಿವಿ ಇತ್ಯಾದಿಗಳನ್ನು ಕೊಂಡು ಹೋಗಿರುವುದಾಗಿ ದೀನನಾಥರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News