ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ ಪ್ರಕರಣ; ತನಿಖೆಗೆ ಸೂಚಿಸಿದರೆ ಪೊಲೀಸ್ ಇಲಾಖೆ ಕ್ರಮ: ಗೃಹ ಸಚಿವ ಪರಮೇಶ್ವರ್

Update: 2023-10-29 14:29 GMT

ಉಡುಪಿ: ಸಹಕಾರಿ ಇಲಾಖೆಗೆ ಸೇರಿದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರದ ಬಗ್ಗೆ ಸಹಕಾರಿ ಮತ್ತು ಸಕ್ಕರೆ ಸಚಿವರು ಜಂಟಿಯಾಗಿ ತನಿಖೆ ಮಾಡುತ್ತಾರೆ. ಪೊಲೀಸ್ ತನಿಖೆಗೆ ಸೂಚನೆ ಬಂದರೆ ನಾವು ಕೂಡ ಮಾಡುತ್ತೇವೆ. ಸರಕಾರ ಪೊಲೀಸ್ ಇಲಾಖೆಗೆ ತನಿಖೆಗೆ ಸೂಚಿಸಿದರೆ ಕ್ರಮ ಜರಗಿಸಲಾಗುವುದು. ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲೂ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮ ಗಮನ ಇರಿಸಿದ್ದೇವೆ. ಈ ಕುರಿತು ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ ಸೂಚನೆ ನೀಡ ಲಾಗಿದೆ. ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ಇಲಾಖೆ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಲು ಬಿಡುವುದಿಲ್ಲ ಎಂದರು.

ಆಪರೇಷನ್ ಕಮಲ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ಇನ್ನು ಐದು ವರ್ಷ ಕಾದು ಕೊಂಡು ಇರಲಿ ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಸರಕಾರದ ಅಧಿಕಾರ ಹಂಚಿಕೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆಗಳು ಆಗುತ್ತಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿಯಾ ಗಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ಈ ಬಗ್ಗೆ ಏನಾದರೂ ಹೇಳಿದ್ದಾರಾ? ಕೇವಲ ಊಹೆಯ ಮೇಲೆ ಚರ್ಚೆ ಯಾಗುತ್ತಿದೆ. ಅಧಿಕಾರ ಹಂಚಿಕೆಯ ಪ್ರಶ್ನೆಯನ್ನು ಮಾಧ್ಯಮ ಯಾಕೆ ಕೇಳ ಬೇಕು? ಈ ಪ್ರಶ್ನೆ ಯಾಕಾದರೂ ಉದ್ಬವ ಆಗಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ. ಉಳಿದವುಗಳೆಲ್ಲ ಈಗ ಅಪ್ರಸ್ತುತ. ಯಾವುದೇ ಬದಲಾವಣೆ ಗಳಿದ್ದರೆ ಸಂದರ್ಭ ಬಂದಾಗ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಅವರು ತಿಳಿಸಿದರು.

ಸತೀಶ್ ಜಾರಕಿಹೊಳಿ ಅಸಮಾಧಾನ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿ ಸಚಿವರು, ಸತೀಶ್ ಜಾರಕಿಹೊಳಿ ಸಮಾಧಾನವಾಗಿದ್ದಾರೆ, ಅವರಿಗೆ ಏನಾಗಿದೆ ? ಮನೆಯಲ್ಲಿ ಊಟ ಮಾಡುವುದು ತಪ್ಪೇ? ಈ ವಿಶೇಷ ಅರ್ಥಗಳನ್ನು ಯಾಕೆ ಕಲ್ಪಿಸುತ್ತೀರಿ ? ಬೆಳಗಾವಿಯಲ್ಲಿ ಎಲ್ಲವೂ ಸರಿಯಾಗಿದೆ. ಚೆನ್ನಾಗಿ ಅಧಿಕಾರ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಚಿಂತಕರು, ಬಿಜೆಪಿ ಶಾಸಕರಿಗೆ ಸರಕಾರ ಕಿರುಕುಳ ನೀಡುತ್ತೇವೆ ಎಂಬ ನಳಿನ್ ಕುಮಾರ್ ಕಟೀಲ್ ಆರೋಪದ ಕುರಿತು ಪ್ರತ್ರಿಯಿಸಿದ ಅವರು, ನಾವು ಬಿಜೆಪಿಯವರನ್ನು ಕೇಳಿಕೊಂಡು ಆಡಳಿತ ಮಾಡುತ್ತಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯ ಸಲಹೆ ಕೊಟ್ಟರೆ ಪರಿಗಣಿಸಬಹುದು. ಟೀಕೆ ಟಿಪ್ಪಣಿ ಮಾಡುವುದು ಬಿಟ್ಟು, ರಾಜ್ಯದ ಹಿತ ದೃಷ್ಟಿಯಿಂದ ಸಲಹೆ ಕೊಡಲಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News