ಮಣಿಪಾಲದಲ್ಲಿ ಪಬ್, ಡ್ರಗ್ಸ್ ಹಾವಳಿಗೆ ಬ್ರೇಕ್: ವಾರಾಂತ್ಯದಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ
ಮಣಿಪಾಲ: ವಾರಾಂತ್ಯದ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿನ ಪಬ್, ಡ್ರಗ್ಸ್ ಹಾವಳಿ ಸಹಿತ ರಾತ್ರಿ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಣಿಪಾಲದಲ್ಲಿ ಪಬ್ ಮತ್ತು ಗಾಂಜಾ ವಿಚಾರದಲ್ಲಿ ನಡೆಯುವ ವ್ಯವಹಾರ ಮತ್ತು ನಿಯಮ ಮೀರಿ ಮಧ್ಯರಾತ್ರಿ ನಂತರ ಕೂಡ ನಡೆಯುತ್ತಿರುವ ವಿದ್ಯಾರ್ಥಿ ಗಳ ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸರಿಗೆ ದೂರು ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಅದರಂತೆ ಇಂದು ರಾತ್ರಿ ಮಣಿಪಾಲದಲ್ಲಿರುವ ಆರು ಪಬ್‌ಗಳಿಗೆ ಸಂಗೀತ ಹಾಕದೆ ಮದ್ಯ ವ್ಯವಸ್ಥೆ ಮಾಡಲು ಸೂಚಿಸಲಾಗಿದ್ದು, ಮಧ್ಯರಾತ್ರಿ 12ಗಂಟೆಗೆ ಪಬ್ ಬಂದ್ ಮಾಡುವಂತೆ ಖಡಕ್ ವಾರ್ನಿಂಗ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್, ಎಸ್ಸೈ ಗಳಾದ ಅಬ್ದುಲ್ ಖಾದರ್, ಅಕ್ಷಯ ಕುಮಾರಿ ನೇತೃತ್ವ ದಲ್ಲಿ ಮಣಿಪಾಲದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಕೆಎಸ್‌ಆರ್‌ಪಿ ಪೊಲೀಸ್ ತುಕಡಿಯನ್ನು ಕೂಡ ನಿಯೋಜಿಸಲಾಗಿದೆ. ಮಣಿಪಾಲದಲ್ಲಿ ಪೊಲೀಸ್ ಗಸ್ತು ತಿರುಗುವುದು ಕೂಡ ಹೆಚ್ಚಿಸಲಾಗಿದೆ.
ಇತ್ತೀಚೆಗೆ ಮಣಿಪಾಲ ಮಾಹೆ ಕಾಲೇಜುಗಳು ಆರಂಭಗೊಂಡಿದ್ದು, ಪ್ರಥಮ ವರ್ಷದ ವಿದ್ಯಾರ್ಥಿಗಳು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ಡ್ರಗ್ಸ್ ಜಾಲಕ್ಕೆ ಬಲಿಯಾಗದಂತೆ ತಡೆಯಲು ಆರಂಭದಲ್ಲಿಯೇ ಅವರನ್ನು ನಿಯಂತ್ರಿಸಲು ಈ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ವೇಳೆ ಮಣಿಪಾಲದ ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್, ಎಂಐಟಿ ಬಳಿ ಸೇರಿದಂತೆ ಹಲವು ಕಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಹಾಗೂ ವಾಹನಗಳ ತಪಾಸಣೆ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ.