ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ: ಉಡುಪಿಯಲ್ಲಿ 6 ಮನೆ, ಎರಡು ಕೊಟ್ಟಿಗೆಗೆ ಹಾನಿ
ಉಡುಪಿ, ಜು.19: ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಾಳೆ ಬೆಳಗ್ಗೆ 8:30ರವರೆಗೆ ಆರೆಂಜ್ ಅಲರ್ಟ್ ಹಾಗೂ ನಂತರದ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಜು.23ರಂದು ಮತ್ತೆ ಆರೆಂಜ್ ಅಲರ್ಟ್‌ನ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸುವ ಸಾಧ್ಯತೆಯನ್ನು ವರದಿಯಲ್ಲಿ ನೀಡಲಾಗಿದೆ. ಇದರೊಂದಿಗೆ ಮಂಗಳೂರಿನಿಂದ ಕಾರವಾರದ ವರೆಗಿನ ಕಡಲು ಪ್ರಕ್ಷುಬ್ಧವಾಗಿರಲಿದ್ದು, 3.5ಮೀ.ನಿಂದ4.1ಮೀ.ಎತ್ತರದ ಅಲೆಗಳು ಜು.20ರ ಮಧ್ಯರಾತ್ರಿ 11:30ರವರೆಗೆ ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಳೆದೊಂದು ದಿನದಲ್ಲಿ ಹೆಚ್ಚಿರುವ ಪರಿಣಾಮ ಬಜೆ ಡ್ಯಾಂ ಹಾಗೂ ಮುಂಡ್ಲಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಬಜೆಯಲ್ಲಿ ಪ್ರಸ್ತುತ ನೀರಿನ ಮಟ್ಟ 6.10ಮೀ. ಆದರೆ, ಮುಂಡ್ಲಿಯಲ್ಲಿ 6.70ಮೀ. ನೀರಿದೆ ಎಂದು ವರದಿಗಳು ತಿಳಿಸಿವೆ.
ಕಳೆದೆರಡು ದಿನಗಳ ಗಾಳಿ-ಮಳೆಯಿಂದಾಗಿ ಜಿಲ್ಲೆಯಲ್ಲಿ ಆರು ಮನೆಗಳಿಗೆ ಹಾಗೂ ಎರಡು ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ. ಬ್ರಹ್ಮಾವರ ತಾಲೂಕು ಬಾಳ್ಕುದ್ರು ಗ್ರಾಮದ ರಾಮಕೃಷ್ಣ ಎಂಬವರ ವಾಸ್ತವ್ಯದ ಮನೆ ಗಾಳಿಮಳೆಯಿಂದ ಭಾಗಶ: ಹಾನಿಗೊಂಡಿದ್ದು 50,000 ದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ಮಟ್ಟು ಗ್ರಾಮದ ಕೃಷ್ಣ ಪೂಜಾರಿ ಎಂಬವರ ಮನೆಯ ಮೇಲೆ ಭಾರೀ ಮರ ಬಿದ್ದು ಮನೆಗೆ ಹಾನಿಯಾಗಿದ್ದು 20ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ರಾಮ ಸಾಲಿಯಾನ್ ಎಂಬವರ ಮನೆ ಮೇಲೂ ಮರ ಬಿದ್ದು 25ಸಾವಿರ ರೂ.ಗಳ ನಷ್ಟ ಸಂಭವಿಸಿದೆ.
ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಸಣ್ಣಮ್ಮ ಎಂಬವರ ಮನೆಗೆ 40,000ರೂ, ಅಸೋಡು ಗ್ರಾಮದ ನಾಗರತ್ನ ಎಂಬವರ ಮನೆಗೆ 50,000 ರೂ. ಹಾಗೂ ಕಟ್‌ಬೆಲ್ತೂರು ಗ್ರಾಮದ ಗುಲಾಬಿ ಎಂಬವರ ಮನೆಗೆ 50,000ರೂ.ಗಳ ಹಾನಿ ಸಂಭವಿಸಿದೆ.
ಇನ್ನು ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಪ್ರೇಮ ಹಾಗೂ ಉಳ್ತೂರು ಗ್ರಾಮದ ಗೀತಾ ಎಂಬವರ ಜಾನುವಾರು ಕಟ್ಟಿಗೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು ತಲಾ 20ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ 51.1ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 51.1 ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿದೆ.
ಹೆಬ್ರಿಯಲ್ಲಿ ಅತ್ಯಧಿಕ 79.5 ಮಿ.ಮೀ. ಮಳೆಯಾದರೆ ಕನಿಷ್ಠ ಮಳೆ ಕಾಪುವಿನಲ್ಲಿ 10.5ಮಿ.ಮೀ. ಸುರಿದಿದೆ. ಉಳಿದಂತೆ ಬೈಂದೂರಿನಲ್ಲಿ 69.7, ಕುಂದಾಪುರದಲ್ಲಿ 64.0, ಕಾರ್ಕಳದಲ್ಲಿ 40.6, ಬ್ರಹ್ಮಾವರದಲ್ಲಿ 26.3, ಹಾಗೂ ಉಡುಪಿಯಲ್ಲಿ 22.8ಮಿ.ಮೀ. ಮಳೆಯಾಗಿದೆ.