ಅ.12: ಭೂಮಿಯ ಸಮೀಪ ಹಾದು ಹೋಗಲಿರುವ ‘ಸಿ/2023 ಎ3’ ಧೂಮಕೇತು

Update: 2024-10-02 15:25 GMT

ಉಡುಪಿ, ಅ.2: ‘ಸಿ/2023 ಎ3’ ಹೆಸರಿನಿಂದ ಗುರುತಿಸಲ್ಪಟ್ಟ ಧೂಮ ಕೇತು ಅ.12ರಂದು ಸುಮಾರು 70,67,200 ಕಿ.ಮೀ. ದೂರದಲ್ಲಿ, 80.5 ಕಿ.ಮೀ. ಪ್ರತಿ ಸೆಕೆಂಡ್‌ನಷ್ಟು ವೇಗದಲ್ಲಿ ಹಾದು ಹೋಗಲಿದೆ. ಈ ಸಮಯವು ಧೂಮಕೇತು ಗೋಚರಿಸಲು ಪ್ರಕಾಶಮಾನವಾಗಿರುತ್ತದೆ ಎಂದು ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ ರಿಸರ್ಚ್ ಸ್ಕಾಲರ್ ಹಾಗೂ ಹವ್ಯಾಸಿ ಖಗೋಳ ವೀಕ್ಷಕ ಅತುಲ್ ಭಟ್ ತಿಳಿಸಿದ್ದಾರೆ.

ಒಂದು ಧೂಳು ಹಾಗು ಹಿಮ-ಕಲ್ಲಿನ ಉಂಡೆಯು, ಸೌರಮಂಡಲದ ಅಂಚಿನಿಂದ ಸುಮಾರು ಲಕ್ಷ ವರ್ಷಗಳ ಹಿಂದೆ ತನ್ನ ಸ್ಥಾನದಿಂದ, ಸೂರ್ಯನ ಸುತ್ತ ಒಂದು ಕಕ್ಷೆಯಲ್ಲಿ ಹೊರಟಿತ್ತು. ಇದನ್ನು ಹಿಂದಿನ ವರ್ಷ ಚೈನಾದ ತ್ಸುಚಿನ್ಶ್ಯಾನ್ ಒಬ್ಸರ್ವೆಟರಿ ಮತ್ತು ದಕ್ಷಿಣ ಆಫ್ರಿಕಾದ ಅಟ್ಲಾಸ್ ಒಬ್ಸರ್ವೆಟರಿಯ ಖಗೋಳ ಶಾಸ್ತ್ರಜ್ಞರು 2023ರ ಜ.9ರಂದು ಸೆರೆ ಹಿಡಿದರು. ಸಿ/2023 ಎ3ದಲ್ಲಿ ‘ಸಿ’ ಎಂದರೆ ಇದು ಆವರ್ತಕವಲ್ಲದ ಧೂಮಕೇತು, ‘ಎ’ ಎಂಬುವುದು, ಇದು ಜನವರಿ ತಿಂಗಳ ಮೊದಲಾರ್ಧದಲ್ಲಿ ಮೊದಲನೆಯ ಬಾರಿ ವೀಕ್ಷಿಸಿರುವ 3ನೆಯ ಧೂಮಕೇತು.

ಹವ್ಯಾಸಿ ಖಗೋಳ ಆಸಕ್ತರು ಈ ಧೂಮಕೇತುವನ್ನು ಅಕ್ಟೋಬರ್ ತಿಂಗಳ ಹಲವಾರು ದಿನಗಳಲ್ಲಿ ನೋಡಿ ಆನಂದಿಸ ಬಹುದು. ಆವರ್ತಕವಲ್ಲದ ಧೂಮಕೇತುಗಳೆಲ್ಲ ಸೌರಮಂಡಲ ಹೊರಭಾಗದಲ್ಲಿ ಊರ್ಟ್‌ಕ್ಲೌಡ್‌ನಿಂದ ಬರುತ್ತವೆ. ಈ ಊರ್ಟ್‌ಕ್ಲೌಡ್ ಸೂರ್ಯನಿಂದ ಸುಮಾರು 2000 ಖಗೋಳ ಮಾನ(1 ಖಗೋಳ ಮಾನ=150 ಮಿಲಿಯ ಕಿಲೋ ಮೀ.: ಭೂಮಿ- ಸೂರ್ಯನ ಮಧ್ಯದ ಅಂತರ)ದಿಂದ ಪ್ರಾರಂಭವಾಗಿ ಸುಮಾರು 2 ಲಕ್ಷ ಖಗೋಳಮಾನದ ವರೆಗೆ ವಿಸ್ತರಿಸುತ್ತದೆ. ಇಲ್ಲಿ ಕೋಟ್ಯಾಂತರ ಹಿಮ-ಕಲ್ಲಿನ ಉಂಡೆಗಳು ಉಂಟಾಗಿವೆ. ಸಿ/2023 ಎ3ಕೂಡ ಈ ಸ್ಥಳದಿಂದಲೇ ಹೊರಟು ಸೂರ್ಯನೆಡೆ ಸಾಗಿದೆ.

ಈ ಧೂಮಕೇತುವು ಸೂರ್ಯನ ಸುತ್ತ ಒಂದು ಸುಧೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತದೆ. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪವಾಗಿ ಸೆ.27ರಂದು 5.8 ಕೋಟಿ ಕಿ.ಮೀ. ದೂರದಲ್ಲಿತ್ತು. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪಕ್ಕೆ ಬಂದು, ತನ್ನ ಕಕ್ಷೆಯಲ್ಲಿ ಹಾದು ಹೋಗುತ್ತ ಭೂಮಿಗೆ ಸಮೀಪವಾಗಿ ಈ ಧೂಮಕೇತುವು ಅ.12ರಂದು ಸುಮಾರು 70,67,200ಕಿ.ಮೀ. ದೂರದಲ್ಲಿ ಹಾದು ಹೋಗುತ್ತದೆ.

ಪ್ರಸ್ತುತ ಈ ಧೂಮಕೇತುವು, ಮುಂಜಾನೆ 5 ರಿಂದ 5.45ರ ನಡುವೆ ಪೂರ್ವ ಕ್ಷಿತಿಜದ ಕಡೆ ಗೋಚರಿಸುತ್ತದೆ. ಮುಂಜಾನೆ ಪೂರ್ವದಲ್ಲಿ ಕ್ಷಿತಿಜದಿಂದ ಸುಮಾರು 25 ಡಿಗ್ರಿ ಎತ್ತರದಲ್ಲಿ ಸಿಂಹ ರಾಶಿಯ ಮಖಾ ನಕ್ಷತ್ರ(ರೆಗ್ಯುಲಸ್) ಹಾಗು ಅಜಗರ ನಕ್ಷತ್ರ ಪುಂಜದ ಅಲ್ಫಾರ್ಡ್ ನಕ್ಷತ್ರಗಳು ಗೋಚರಿಸುತ್ತಿವೆ. ಈ ಎರಡು ನಕ್ಷತ್ರಗಳನ್ನು ಕ್ಷಿತಿಜದಿಂದ 25 ಡಿಗ್ರಿ ದೂರದಲ್ಲಿ ಗುರುತಿಸ ಬಹುದು. ಈ ಧೂಮಕೇತುವು ಅ.7ರವರೆಗೆ ಮ್ಯಾಗ್ನಿ ಟ್ಯೂಡ್ 2.0ರಷ್ಟು ಪ್ರಮಾಣದಲ್ಲಿ ಗೋಚರಿಸುತ್ತದೆ (ಮ್ಯಾಗ್ನಿ ಟ್ಯೂಡ್ ಕಿರಿದಾದಷ್ಟು ಕಾಯವು ಹೆಚ್ಚು ಪ್ರಕಾಶಮಾನವಾಗಿರುತ್ತದೆ). ಇದು ಬರಿಗಣ್ಣಿನಲ್ಲೂ ನೋಡಲು ಸಾಧ್ಯ.

ಈ ಅವಧಿಯಲ್ಲಿ ಈ ಧೂಮಕೇತುವನ್ನು ಗೋಚರಿಸಲು ಸಾಧ್ಯವಾಗದಿದ್ದರೆ, ಅ.15ರಿಂದ 30ರವರೆಗೆ, ಸಂಜೆ ಆಕಾಶದಲ್ಲಿ ಶುಕ್ರ ಗ್ರಹದ ಬಲಬದಿಯಲ್ಲಿ (ಉತ್ತರ ದಿಕ್ಕಿನಲ್ಲಿ) ಗುರುತಿಸಬಹುದು. ದೂರಬಿನ್ ಅಥವಾ ಸಣ್ಣ ದೂರ ದಶಕದ ಮೂಲಕ ಈ ಧೂಮಕೇತುವನ್ನು ಈ ಅವಧಿಯಲ್ಲಿ ನೋಡಿ ಆನಂದಿಸಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News