ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆ: ಎರಡು ದಶಕದ ಬಳಿಕ ಕಾಂಗ್ರೆಸ್ ಬೆಂಬಲಿತರ ಮೇಲುಗೈ

Update: 2024-12-13 13:35 GMT

ಕುಂದಾಪುರ: ಕಳೆದ ಡಿ.8ರಂದು ನಡೆದ ಗಂಗೊಳ್ಳಿ ಗ್ರಾಮ ಪಂಚಾಯಿತ್ ಚುನಾವಣೆ ಫಲಿತಾಂಶ ಗುರುವಾರ ತಡರಾತ್ರಿ ಹೊರ ಬಿದ್ದಿದ್ದು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲಿತರು ಸೇರಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.

ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಬಿಜೆಪಿ ಬೆಂಬಲಿತರ ಭದ್ರಕೋಟೆಯಾಗಿದ್ದ ಗಂಗೊಳ್ಳಿ ಗ್ರಾಪಂನಲ್ಲಿ ಈ ಬಾರಿ ಬಿಜೆಪಿ ಬೆಂಬಲಿತರು ತೀವ್ರ ಹಿನ್ನಡೆ ಕಂಡಿದ್ದಾರೆ. ಮುಂದಿನ ಅವಧಿಗೆ ನಡೆದಿದ್ದ ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲಿತರ ಸಹಕಾರದೊಂದಿಗೆ, ಕಾಂಗ್ರೆಸ್ ಪಕ್ಷದ ಬೆಂಬಲಿತರು ಗಂಗೊಳ್ಳಿ ಗ್ರಾಪಂ ಅಧಿಕಾರದ ಗದ್ದುಗೆ ಹಿಡಿಯುವ ಕಾಲ ಸನ್ನಿಹಿತವಾಗಿದೆ ಎಂದು ಮೂಲಗಳು ತಿಳಿಸಿವೆ.

33 ಸದಸ್ಯ ಬಲದ ಗಂಗೊಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು 12 ಸ್ಥಾನಗಳಲ್ಲಿ, ಎಸ್‌ಡಿಪಿಐ ಬೆಂಬಲಿತರು 7 ಸ್ಥಾನಗಳಲ್ಲಿ, ಬಿಜೆಪಿ ಬೆಂಬಲಿತರು 12 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸಹ ಗೆಲುವಿನ ನಗು ಬೀರಿದ್ದಾರೆ. ಕಳೆದ ಬಾರಿ 23 ಸ್ಥಾನಗಳಿಸಿದ್ದ ಬಿಜೆಪಿ ಬೆಂಬಲಿತರು ಈ ಬಾರಿ 11 ಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ಸಲ 6 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 6 ಸ್ಥಾನ ವೃದ್ಧಿಸಿಕೊಂಡು 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, 4 ಸ್ಥಾನ ಗಳಿಸಿದ್ದ ಎಸ್ಡಿಪಿಐ ಮೂರು ಸ್ಥಾನ ವೃದ್ಧಿಸಿಕೊಂಡು ಒಟ್ಟು 7ರಲ್ಲಿ ಜಯಗಳಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು 4 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, ಎಸ್ಡಿಪಿಐ 6 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದೆ. ಕಳೆದ ಕೆಲ ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ವಾರ್ಡ್‌ಗಳಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿಗರು ಹುಬ್ಬೇರುವಂತ ಸಾಧನೆ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಬಂಡಾಯ ಹಾಗೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿರುವುದು ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲು ವಿಫಲರಾಗಿರುವುದು ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಕಾಂಗ್ರೆಸ್ ಎಸ್ಡಿಪಿಐ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸಂಘಟಿತ ಹೋರಾಟ ನೀಡಿರುವುದು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಗುರುವಾರ ಬೆಳಿಗ್ಗೆಯಿಂದ ಕುಂದಾಪುರದ ಆಡಳಿತ ಸೌಧದ ಕೋರ್ಟ್ ಹಾಲ್‌ನಲ್ಲಿ ಮಂದಗತಿಯಲ್ಲಿ ಸಾಗಿದ ಮತ ಎಣಿಕೆ ಕಾರ್ಯ ರಾತ್ರಿ 10 ಗಂಟೆವರೆಗೂ ಸಾಗಿತ್ತು. ಪ್ರತಿಯೊಂದು ಕ್ಷೇತ್ರಕ್ಕೆ ಒಂದು ಟೇಬಲ್ ನಂತೆ ಮೂರು ಸುತ್ತುಗಳಲ್ಲಿ ಮತ ಎಣಿಕೆ ನಡೆಸಲಾಯಿತು. ಮತ ಎಣಿಕೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಕುಂದಾಪುರ ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮೀ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು , ತಾಲೂಕು ಯುವಜನ ಸೇವಾ ಅಧಿಕಾರಿ ಕುಸುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕುಂದಾಪುರ ಪೊಲೀಸ್ ಇನ್ಸಪೆಕ್ಟರ್ ನಂಜಪ್ಪ ನೇತೃತ್ವದಲ್ಲಿ ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯೋತ್ಸವ: ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಮತ್ತು ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಡರಾತ್ರಿ ಕುಂದಾಪುರದಿಂದ ಗಂಗೊಳ್ಳಿಯವರೆಗೆ ಭರ್ಜರಿ ವಿಜಯೋತ್ಸವ ನಡೆಸಿ ಸಂಭ್ರಮಿಸಿದರು.

ಗಂಗೊಳ್ಳಿ: ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು

ಗಂಗೊಳ್ಳಿ 1ನೇ ಕ್ಷೇತ್ರ: ಗುರುರಾಜ್ (558), ನಾಗರಾಜ ಖಾರ್ವಿ (546), ರೇಖಾ ಖಾರ್ವಿ (483), ಸರೋಜ ಕೃಷ್ಣ ಪೂಜಾರಿ (462), ನಾಗರತ್ನ ಶೇರುಗಾರ್ (396)- ಬಿಜೆಪಿ ಬೆಂಬಲಿತರು

ಗಂಗೊಳ್ಳಿ-2: ತಬ್ರೆಜ್ (578), ರಜಬ್ (516), ಅಬೂಬಕ ನಾಖುದಾ (505) ಮತ್ತು ಶರೀನಾ (530)- ಎಸ್ಡಿಪಿಐ ಬೆಂಬಲಿತರು

ಗಂಗೊಳ್ಳಿ-3: ಗೋಪಾಲ ಖಾರ್ವಿ (356), ಮಮತಾ ಎಸ್.ಗಾಣಿಗ (346)-ಪಕ್ಷೇತರರು, ದೀಪಾ (225) ಮತ್ತು ಶ್ಯಾಮಲಾ ಶೆಡ್ತಿ (251)-ಬಿಜೆಪಿ ಬೆಂಬಲಿತರು.

ಗಂಗೊಳ್ಳಿ-4: ದೇವೇಂದ್ರ ಖಾರ್ವಿ (412), ಶೋಭಾ ಕೃಷ್ಣ ಬಿಲ್ಲವ (331), ಅಮ್ಮು ಮೊಗೇರ್ತಿ (291)-ಕಾಂಗ್ರೆಸ್ ಬೆಂಬಲಿತರು, ಮಹೇಶ್ (275) ಬಿಜೆಪಿ ಬೆಂಬಲಿತ

ಗಂಗೊಳ್ಳಿ-5: ಜಯೇಂದ್ರ ಖಾರ್ವಿ (505), ಗಣೇಶ ಪೂಜಾರಿ (344), ಜನ್ನಿ ಖಾರ್ವಿ (352), ಲಕ್ಷ್ಮೀ ಪೂಜಾರಿ (326)-ಕಾಂಗ್ರೆಸ್ ಬೆಂಬಲಿತರು.

ಗಂಗೊಳ್ಳಿ-6: ಮೋಮಿನ್ ಸಮೀರ್ ಅಹ್ಮದ್ (376), ಜಮೀಲಾ (398), ಮ್ಯಾಕ್ಸಿಮ್ ಅಲ್ಬರ್ಟ್ ಫೆರ್ನಾಂಡಿಸ್ (396)-ಎಸ್ಡಿಪಿಐ ಬೆಂಬಲಿತರು, ಜಯಂತಿ ಖಾರ್ವಿ (554), ಮಂಜುಳಾ ದೇವಾಡಿಗ (460)-ಕಾಂಗ್ರೆಸ್ ಬೆಂಬಲಿತರು.

ಗಂಗೊಳ್ಳಿ-7: ಶ್ರೀನಾಥ ಖಾರ್ವಿ (340), ರಿಯಾಜ್ ಅಹಮ್ಮದ್ (333), ಸುರೇಖಾ ಕಾನೋಜಿ (347)-ಕಾಂಗ್ರೆಸ್ ಬೆಂಬಲಿತರು.

ಗಂಗೊಳ್ಳಿ-8: ಅಕ್ಕಮ್ಮ ಯು.ಕುಮಾರ್ (391), ಅಶ್ವಿನಿ ಖಾರ್ವಿ (412), ಚಂದ್ರ ಖಾರ್ವಿ (517 ), ರಾಜೇಂದ್ರ (443)- ಬಿಜೆಪಿ ಬೆಂಬಲಿತರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹರ್ಷ

ಸುಮಾರು ಮೂರು ದಶಕಗಳ ಕಾಲ ಗಂಗೊಳ್ಳಿ ಪಂಚಾಯಿತಿಯಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಬೆಂಬಲಿತರ ಸುದೀರ್ಘ ಅವಧಿಯ ಆಳ್ವಿಕೆಯನ್ನು ಕೊನೆಗೊಳಿಸಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಅಭ್ಯರ್ಥಿಗಳ ಪರ ಮತ ನೀಡಿದ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಮತದಾರರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಬಂದರು ನಗರಿಗಳಲ್ಲಿ ಒಂದಾಗಿರುವ ಗಂಗೊಳ್ಳಿಯ ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿದ್ದರಿಂದ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಕಳೆದ ವರ್ಷಗಳಲ್ಲಿ ನಡೆಯದೆ ಇದ್ದುದರಿಂದ ಗಂಗೊಳ್ಳಿ ಪ್ರಬುದ್ಧ ಮತದಾರರು, ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಕಾಂಗ್ರೆಸ್ ಪರವಾದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡುವ ಮೂಲಕ ಐತಿಹಾಸಿಕ ನಿರ್ಧಾರ ಹಾಗೂ ಬದಲಾವಣೆ ಮಾಡಿದ್ದಾರೆ ಎಂದರು.

ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಗಲಿರುಳು ಶೃಮಿಸಿದ ಪಕ್ಷದ ಕಾರ್ಯಕರ್ತರು, ವೀಕ್ಷಕರು ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News