ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಮುಂದುವರಿದ ಮಳೆ
ಕುಂದಾಪುರ, ಜು.25: ಕಳೆದ ರಾತ್ರಿಯಿಂದ ಸುರಿಯುತ್ತಿದ್ದ ಮಳೆ ಮಂಗಳ ವಾರ ಬೆಳಗ್ಗೆ ನಂತರ ತುಸು ಕಡಿಮೆಯಾಗಿದ್ದರೂ, ನೆರೆ ಪೀಡಿತ ಪ್ರದೇಶ ಗಳಲ್ಲಿ ಉಕ್ಕೇರಿರುವ ನೀರು ಸಂಪೂರ್ಣವಾಗಿ ಇಳಿದಿಲ್ಲ. ಇದರಿಂದ ಕುಂದಾಪುರ ತಾಲೂಕಿನ ವಕ್ವಾಡಿ, ಬಳ್ಕೂರು, ಕೋಣಿ ಭಾಗದಲ್ಲಿ ನೆರೆ ಭೀತಿ ಹೆಚ್ಚಿದೆ.
ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡ, ಮರವಂತೆ, ಪಡುಕೋಣೆ, ಕೋಣ್ಕಿ ಭಾಗದಲ್ಲಿ ನೆರೆ ಉಂಟಾಗಿದೆ. ಮಳೆ ಹಾಗೂ ಗಾಳಿಯ ಒತ್ತಡಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಬಹುತೇಕ ನದಿಗಳು ತುಂಬಿ ಹರಿದು ಅಕ್ಕ-ಪಕ್ಕದ ಕೃಷಿ ತೋಟ, ಗದ್ದೆ, ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.
ನೆರೆ ನೀರು ಗದ್ದೆ, ತೋಟ, ತೋಡು ರಸ್ತೆಗಳಲ್ಲಿ ವ್ಯಾಪಿಸಿದ್ದಲ್ಲದೆ ಅಲ್ಲಲ್ಲಿ ಮನೆಯಂಗಳದಲ್ಲೂ ಮಳೆ ನೀರು ತುಂಬಿದೆ. ನೆರೆ ಕಾಣಿಸಿಕೊಂಡಿರುವ ಕೆಲವು ಗ್ರಾಮದಲ್ಲಿ ನೂರಾರು ಎಕರೆ ಕೃಷಿ ಗದ್ದೆಗಳಲ್ಲಿ ನೆರೆಯ ನೀರು ವ್ಯಾಪಿಸಿದೆ. ಇನ್ನೂ 2-3 ದಿನ ನೆರೆಯ ನೀರು ಇಳಿಯದೆ ಇದ್ದಲ್ಲಿ ನೇಜಿ ಮಾಡಿರುವ ಭತ್ತದ ಗದ್ದೆಗಳು ಕೊಳೆಯುವ ಭೀತಿಯಿದೆ.