ನಿರಂತರ ಮಳೆ: ಬೈಂದೂರು ತಾಲೂಕಿನ ಹಲವು ಪ್ರದೇಶಗಳು ಜಲಾವೃತ
ಬೈಂದೂರು: ನಿರಂತರ ಮಳೆಯಿಂದಾಗಿ ಸೌಪರ್ಣಿಕಾ ನದಿ ಹರಿಯುವ ಅಕ್ಕ-ಪಕ್ಕ ಪ್ರದೇಶಗಳಾದ ನಾವುಂದ ಸಾಲ್ಬುಡ, ಮರವಂತೆ, ನಾಡಾ ಗ್ರಾಪಂ ವ್ಯಾಪ್ತಿಯ ಬಡಾಕೆರೆ, ಕಡ್ಕೆ, ಪಡುಕೋಣೆ, ಹಡವು ,ತೆಂಗಿನ ಗುಂಡಿ, ಸೇನಾಪುರ, ಕುಂಬಾರಮಕ್ಕಿ, ಕಟ್ಟು, ಹಕ್ಲಾಡಿ ಗ್ರಾಮದ ಬಟ್ಟೆಕುದ್ರು, ಯಳೂರು, ತೊಪ್ಲು ಪ್ರದೇಶಗಳು ನೆರೆಯಿಂದಾಗಿ ಜಲಾವೃತಗೊಂಡಿದೆ.
ತೋಟ ಗದ್ದೆಗಳನ್ನು ದಾಟಿ ನೆರೆಯ ನೀರು ಮನೆಯಂಗಳಕ್ಕೆ ಬಂದಿರುವುದ ರಿಂದ, ಮನೆಯ ಸುತ್ತೆಲ್ಲ ನೀರು ನಿಂತು ದ್ವೀಪದ ಪರಿಸ್ಥಿತಿ ನಿರ್ಮಾಣ ವಾಗಿದೆ. ಪೋಲಿಸ್ ಹಾಗೂ ಕಂದಾಯ ಇಲಾಖೆಯಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ನೆರೆಯ ನೀರಿನಲ್ಲಿ ಸಿಲುಕಿದ ಜಾನುವಾರುಗಳನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿರುವ ಘಟನೆಯೂ ನಡೆದಿದೆ. ಮನೆಗೆ ತೆರಳುವ ರಸ್ತೆ ಹಾಗೂ ಕಾಲ್ನಡಿಗೆಯ ದಾರಿಗಳಲ್ಲಿ ನೆರೆ ನೀರು ತುಂಬಿರುವುದರಿಂದಾಗಿ ಸ್ಥಳೀಯರು ಸಂಚಾರಕ್ಕಾಗಿ ದೋಣಿ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ.
ಪ್ರತಿ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ನೆರೆಯ ತೊಂದರೆಯನ್ನು ಅನುಭವಿಸುತ್ತಿರುವ ಬೈಂದೂರು ತಾಲ್ಲೂಕಿನ ನಾವುಂದ ಗ್ರಾಮದ ಕುದ್ರು ಭಾಗದ ನೂರಕ್ಕೂ ಅಧಿಕ ಮನೆಯವರು ೪-೫ ದಿನಗಳ ಕಾಲ ಮನೆ ಬಿಟ್ಟು ಹೊರ ಬರಲಾಗದ ದುಸ್ಥಿತಿ ಅನುಭವಿಸುತ್ತಾರೆ.
ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಕೃತಕ ಕೆರೆ ಸೃಷ್ಟಿಯಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಶನಿವಾರ ಬೀಸಿದ ಗಾಳಿ ಸಹಿತ ಮಳೆಯ ಕಾರಣ ಮರ ಬಿದ್ದು ವಿವಿಧೆಡೆ ಸಂಜೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಭಾನುವಾರ ಸಂಜೆ ತನಕ ವಿದ್ಯುತ್ ಸಂಪರ್ಕವಿಲ್ಲದೆ ಜನರಿಗೆ ಸಮಸ್ಯೆಯಾಗಿದೆ.
ಕುಂಭಾಶಿಯಲ್ಲಿ ಮನೆಗೆ ಹಾನಿ
ಕುಂಭಾಶಿ ಪಣಹತ್ವಾರ್ ಬೆಟ್ಟು ನಿವಾಸಿ ಗೋವಿಂದ ಪೂಜಾರಿ ಎಂಬವರ ಮನೆ ಮೇಲೆ ಇಂದು ಮುಂಜಾನೆ ವೇಳೆ ತೆಂಗಿನ ಮರಬಿದ್ದಿದ್ದು, ಇದರಿಂದ ಮನೆಗೆ ಸಂಪೂರ್ಣ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮನೆಯಲ್ಲಿದ್ದ ಗೋವಿಂದ ಪೂಜಾರಿ, ಅವರ ಪತ್ನಿ ಹಾಗೂ ಮಗ ಹಾಲ್‌ನಲ್ಲಿ ಮಲಗಿದ್ದು ಶಬ್ದದಿಂದ ಎಚ್ಚರಗೊಂಡಿದ್ದರಿಂದ ಅದೃಷ್ಟವಶಾತ್ ಸಂಭಾವ್ಯ ಅವಘಡ ತಪ್ಪಿದೆ. ಸ್ಥಳಕ್ಕೆ ಕುಂಭಾಶಿ ಗ್ರಾಪಂ ಪಿಡಿಒ ಜಯರಾಮ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ, ಅಧ್ಯಕ್ಷೆ ಶ್ವೇತಾ, ಸದಸ್ಯರಾದ ರಾಧಾ ದಾಸ್, ಸುಕನ್ಯಾ, ಕುಂಭಾಶಿ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಹೇರ್ಳೆ, ಮಹಾಬಲೇಶ್ವರ ಆಚಾರ್, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಣ್ಣಯ್ಯ ಪುತ್ರನ್ ಭೇಟಿ ನೀಡಿದರು.