ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ಭ್ರಷ್ಟಾಚಾರ; ಸೂಕ್ತ ತನಿಖೆಗೆ ಶೀಘ್ರವೇ ಆದೇಶ: ಸಚಿವ ಚೆಲುವರಾಯ ಸ್ವಾಮಿ

Update: 2023-10-14 15:20 GMT

ಉಡುಪಿ, ಅ.14: ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂ. ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು ಶೀಘ್ರವೇ ತನಿಖೆಗೆ ಆದೇಶ ನೀಡಲಿದ್ದಾರೆ ಎಂದು ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ಸಚಿವರಾದ ಬಳಿಕ ಮೊದಲ ಸಲ ಉಡುಪಿಗೆ ಭೇಟಿ ನೀಡಿದ ಸಚಿವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು. ಕಾರ್ಖಾನೆಯ ಗುಜರಿ ವಿಲೇವಾರಿಯಲ್ಲಿ ಗೋಲ್‌ಮಾಲ್ ನಡೆದಿರುವ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗ ಬೇಕು. ಅಲ್ಲದೇ ಸಕ್ಕರೆ ಕಾರ್ಖಾನೆಯನ್ನು ಮತ್ತೆ ತೆರೆಯುವ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಪ್ರಕರಣ ತನಿಖೆಗೆ ಆದೇಶ ಮಾಡುವ ಹಂತದಲ್ಲಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಕೃಷಿ ಕಾಲೇಜು: ಬ್ರಹ್ಮಾವರದಲ್ಲಿದ್ದ ಕೃಷಿ ಡಿಪ್ಲೋಮ ಕಾಲೇಜಿನ್ನು ಮುಚ್ಚಲು ಹಿಂದಿನ ಸರಕಾರ ನಿರ್ಧರಿಸಿದ್ದು, ಅದರ ಬದಲು ಕೃಷಿ ಕಾಲೇಜನ್ನು ಪ್ರಾರಂಭಿಸಬೇಕೆಂಬ ಬೇಡಿಕೆ ಎಲ್ಲೆಡೆ ಕೇಳಿಬರುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ರಾಜ್ಯದ ಎಲ್ಲಾ ಜಿಲ್ಲೆಗಳಿಂದ 15 ಕಡೆ ಕೃಷಿ ಕಾಲೇಜಿಗೆ ಬೇಡಿಕೆ ಇದೆ. ಆದರೆ ಬ್ರಹ್ಮಾವರದಲ್ಲಿ ಕೃಷಿ ಕಾಲೇಜಿಗೆ ಸಂಶೋಧನಾ ಕೇಂದ್ರ, ಜಮೀನು -ಕಟ್ಟಡ ಎಲ್ಲವೂ ಇವೆ. ಹೀಗಾಗಿ ಕೃಷಿ ಕಾಲೇಜಿಗೆ ಉಡುಪಿ ಜಿಲ್ಲೆ ಉತ್ತಮ ಆಯ್ಕೆ ಅನಿಸುತ್ತಿದೆ. ಕೃಷಿ ವಿವಿ ಮತ್ತು ಸರಕಾರದ ಜೊತೆ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಲೋಡ್‌ ಶೆಡ್ಡಿಂಗ್: ರಾಜ್ಯಾದ್ಯಂತ ಕಂಡುಬಂದಿರುವ ಪವರ್‌ಕಟ್ ಹಾಗೂ ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿ ಸಿದ ಸಚಿವರು ಮಳೆಯ ಅಭಾವದಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ರಾಜ್ಯದಲ್ಲಿ ತುಂಬಾ ಸಮಸ್ಯೆ ಇದೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದರು.

ನಮ್ಮ ಬಯಲು ಸೀಮೆ ಕಡೆ ಕೂಡಾ ತುಂಬಾ ಸಮಸ್ಯೆ ಇದೆ. ಎಲ್ಲವನ್ನೂ ಸರಿಪಡಿಸಬೇಕು ಎಂಬುದು ಸರಕಾರದ ಉದ್ದೇಶ. ಒಂದು ಕಡೆ ಮಳೆ ಇಲ್ಲ, ಇನ್ನೊಂದು ಕಡೆ ಕರೆಂಟ್ ಇಲ್ಲ. ಹೀಗಾಗಿ ರಾಜ್ಯದ ರೈತರಿಗೆ ಬಹಳ ಸಮಸ್ಯೆ ಯಾಗು ತ್ತಿದೆ. ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ಶೀಘ್ರ ಸರಿಪಡಿಸುತ್ತೇವೆ. ಇದಕ್ಕಾಗಿ ಹೊರರಾಜ್ಯಗಳಿಂದ ವಿದ್ಯುತ್ ಖರೀದಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ದುಬಾರಿಯಾದರೂ ವಿದ್ಯುತ್ ಖರೀದಿ ಮಾಡಲೇ ಬೇಕಾಗುತ್ತದೆ ಎಂದು ಚೆಲುವರಾಯ ಸ್ವಾಮಿ ನುಡಿದರು.

42 ಕೋಟಿಗೂ ಸರಕಾರಕ್ಕೂ ಸಂಬಂಧವಿಲ್ಲ: ಬೆಂಗಳೂರಿನಲ್ಲಿ ಐಟಿ ದಾಳಿಯ ವೇಳೆ ಗುತ್ತಿಗೆದಾರರ ಮನೆಯಲ್ಲಿ 42 ಕೋಟಿ ರೂ.ಪತ್ತೆಯಾದ ಬಗ್ಗೆ ಕೇಳಿದಾಗ, ನಾನು ಉಡುಪಿಯಲ್ಲಿ ಇದ್ದೇನೆ. ಹೀಗಾಗಿ ಐಟಿ ದಾಳಿಯಲ್ಲಿ ಹಣ ಸಿಕ್ಕಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೂ 42 ಕೋಟಿ ಸಿಕ್ಕಿರುವುದಕ್ಕೂ ಸರಕಾರಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದರು.

ಈವರೆಗೆ ದಾರಿಯಲ್ಲಿ ಹಣ ಸಿಕ್ಕಿದ್ದಕ್ಕೆ ಯಾರೆಲ್ಲಾ ರಾಜೀನಾಮೆ ಕೊಟ್ಟಿದ್ದಾರೆ. ಯಾರದ್ದೋ ಮನೆಯಲ್ಲಿ ದುಡ್ಡು ಸಿಕ್ಕರೆ, ಕಾಂಗ್ರೆಸ್‌ನವರು ರಾಜೀನಾಮೆ ಕೊಡೋದಿಕ್ಕೆ ಆಗುತ್ತಾ ಎಂದು ನಗುತ್ತಾ ಕೇಳಿದ ಚೆಲುವರಾಯ ಸ್ವಾಮಿ, ನಳಿನ್‌ ಕುಮಾರ್ ಕಟೀಲ್‌ಗೆ ಮಾತನಾಡುವುದೇ ಚಪಲ ಎಂದರು.

ಬೊಮ್ಮಾಯಿ ರಾಜಿನಾಮೆ ಕೊಟ್ಟಿದ್ರಾ?: ದುಡ್ಡು ಯಾರದ್ದು ಎಂದು ತನಿಖೆ ಆಗುತ್ತದೆ, ಅವರ ಮೇಲೆ ಕ್ರಮ ಆಗುತ್ತದೆ. ಬಿಜೆಪಿ ಸರಕಾರದಲ್ಲಿ ಯಾರ್ಯಾರದ್ದು ಎಷ್ಟೆಷ್ಟು ದುಡ್ಡು ಎಲ್ಲೆಲ್ಲಿತ್ತು ಎಂಬ ಬಗ್ಗೆ ಗೊತ್ತಿದೆ. ದುಡ್ಡು ಸಿಕ್ಕ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? ಮುಖ್ಯಮಂತ್ರಿ ಅಥವಾ ಮಂತ್ರಿಗೆ ಸಂಬಂಧ ಇದೆ ಎಂದು ದಾಖಲೆ ಕೊಡಲಿ ಆಮೇಲೆ ಆರೋಪ ಮಾಡಲಿ ಎಂದು ಕಟೀಲು ಸೇರಿದಂತೆ ಬಿಜೆಪಿಯ ಟೀಕಾಕಾರರಿಗೆ ಉತ್ತರಿಸಿದರು.

ಬಿಜೆಪಿ ನಾಯಕರು ನಾಲಗೆಗೆ ಹಿಡಿತ ಇಲ್ಲದೆ ಮಾತನಾಡುತ್ತಾರೆ. ಈಶ್ವರಪ್ಪನ ಮಾತಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ. ಈಶ್ವರಪ್ಪ ಮತ್ತು ಕಟೀಲ್ ಅಣ್ಣತಮ್ಮಂದಿರು. ಆ ಇಬ್ಬರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಬೆಳಗ್ಗೆದ್ದು ಅವರಿಗೆ ಟಿವಿ ಮುಂದೆ ಮಾತನಾಡುವುದೇ ಕೆಲಸ. ಮಾಡಳ್ ವಿರೂಪಾಕ್ಷ ಪ್ರಕರಣದಲ್ಲಿ ಬೊಮ್ಮಾಯಿ ರಾಜೀನಾಮೆ ಕೊಟ್ಟೇ ಇಲ್ಲ ಯಾಕೆ? ಎಂದು ಪ್ರಶ್ನಿಸಿದರು.

ಬಿಜೆಪಿ ಕಂಗಾಲಾಗಿದೆ. ಚುನಾವಣೆ ಎದುರಿಸಲು ಅವರಿಗೆ ಸಾಧ್ಯವಾ ಗುತ್ತಿಲ್ಲ. ಏನೇ ಸಮಸ್ಯೆ ಇದ್ದರೂ ಕಾಂಗ್ರೆಸ್ ಸರಕಾರ ನಿಭಾಯಿಸುತ್ತದೆ. ಅಶ್ವಥ್‌ ನಾರಾಯಣ್, ರವಿಕುಮಾರ್, ಸಿ.ಟಿ.ರವಿ, ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಇವರೆಲ್ಲ ಗಂಭೀರವಾಗಿ ಮಾತನಾಡಿದರೆ ಸರಕಾರ ಉತ್ತರ ಕೊಡುತ್ತದೆ ಎಂದರು.

4,800 ಕೋಟಿ ಪರಿಹಾರಕ್ಕೆ ಬೇಡಿಕೆ: ಕೇಂದ್ರ ಬರ ಅಧ್ಯಯನ ಸಮಿತಿ ಒಂದು ವಾರದಲ್ಲಿ ತನ್ನ ವರದಿ ಕೊಡುವ ನಿರೀಕ್ಷೆ ಇದೆ. ಕಾವೇರಿ ನದಿ ನೀರಿನ ಪ್ರಕರಣದಲ್ಲಿ ಭೇಟಿಗಾಗಿ ಮನವಿ ಕೊಟ್ಟಿದ್ದೆವು, ಅವರು ಬಂದಿಲ್ಲ. ಈಗ ಬರಕ್ಕಾಗಿ 4,800 ಕೋಟಿ ಪರಿಹಾರವನ್ನು ಕೇಳಿದ್ದೇವೆ. ಒಂದು ವಾರ ಹತ್ತು ದಿವಸ ಕಾಯುತ್ತೇವೆ ಎಂದ ಅವರು ರಾಜ್ಯದಿಂದ ಹೋದ ತೆರಿಗೆಯನ್ನು ನಾವು ವಾಪಸ್ ಕೇಳುತ್ತಿದ್ದೇವೆ. ಯಾರು ಸಹ ಅವರ ಕೈಯಿಂದ ಪರಿಹಾರ ನೀಡಲ್ಲ ಎಂದರು.

ಜೆಡಿಎಸ್-ಬಿಜೆಪಿ ದೋಸ್ತಿ: ಕಾಂಗ್ರೆಸ್ ಈ ಹಿಂದೆ ಜೆಡಿಎಸ್ ಜೊತೆ ದೋಸ್ತಿ ಮಾಡಿಕೊಂಡಿದ್ದೆವು. ಬಿಜೆಪಿಯವರಿಗೆ ಇದು ಹೊಸ ಅನುಭವ. ಬಿಜೆಪಿ-ಜೆಡಿಎಸ್ ನಡುವೆ ಹಿಂದಿನ ಕಹಿ ಅನುಭವ ಇದೆ. ಕುಮಾರಸ್ವಾಮಿ ಅವರ ತಂದೆಯ ಮಾತನ್ನು ಕೇಳದೆ ನಿರ್ಧರಿಸಿದ್ದಾರೆ. ಪಕ್ಷದ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿ ದ್ದಾರೆ. ಈ ಮೈತ್ರಿಯಿಂದ ಬಿಜೆಪಿಗೆ ಉಪಯೋಗ ಇಲ್ಲ ಜೆಡಿಎಸ್ ಗೂ ಉಪಯೋಗ ಇಲ್ಲ ಎಂದು ನುಡಿದರು.

ಸಂಸತ್ ಚುನಾವಣೆ ಇನ್ನೂ ಕೂಡ ಕಾವೇರಿಲ್ಲ. ಹೀಗಾಗಿ ಈಗಲೇ ಯಾರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂದು ಹೇಳುವುದು ಸರಿಯಲ್ಲ. ಆದರೂ ಕಾಂಗ್ರೆಸ್ ರಾಜ್ಯದಲ್ಲಿ 20 ಸೀಟು ಪಡೆಯುತ್ತದೆ. ಉಳಿದ ಎಂಟರಲ್ಲಿ ಯಾರಿಗೆ ಎಷ್ಟು ಎಂದು ಅವರೇ ಲೆಕ್ಕ ಹಾಕಿಕೊಳ್ಳಲಿ ಎಂದರು.

ರೈತರ ಆತ್ಮಹತ್ಯೆ: ಕಾಂಗ್ರೆಸ್ ಸರಕಾರ ಬಂದ ಬಳಿಕ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ ಎಂಬ ಬಿಜೆಪಿಯವರ ಆರೋಪದ ಕುರಿತು ಪ್ರಶ್ನಿಸಿದಾಗ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಶೂನ್ಯಕ್ಕಿಳಿಸಬೇಕೆಂಬುದು ನಮ್ಮ ಪ್ರಯತ್ನ. ಐದು ಗ್ಯಾರಂಟಿಯಿಂದ ಒಂದು ಕುಟುಂಬಕ್ಕೆ 5000 ರೂ.ಗಳಷ್ಟು ಹಣ ತಲುಪುತ್ತದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ಬಾರಿ ಆತ್ಮಹತ್ಯೆಯ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಅದನ್ನು ಶೂನ್ಯಕ್ಕಿಳಿಸುವುದು ನಮ್ಮ ಗುರಿ ಎಂದರು.

ಪತ್ನಿಗೆ ಟಿಕೇಟ್ ?: ಮಂಡ್ಯದಿಂದ ಚೆಲುವರಾಯಸ್ವಾಮಿ ಅವರ ಪತ್ನಿಗೆ ಎಂಪಿ ಟಿಕೆಟ್ ಎಂಬ ಸುದ್ದಿ ಕೇಳಿಬರುತ್ತಿರುವ ಬಗ್ಗೆ ಅವರನ್ನು ನೇರವಾಗಿ ಪ್ರಶ್ನಿಸಿದಾಗ, ಕುಟುಂಬದ ಯಾರನ್ನೂ ರಾಜಕೀಯದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಅಭ್ಯರ್ಥಿ ಯಾರೆಂದು ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಚರ್ಚೆ ಮಾಡುವುದನ್ನೇ ಅಪರಾಧ ಎಂದು ಹೇಳಕ್ಕಾಗುತ್ತಾ? ಎಂದರು.

ಸ್ನೇಹಿತರು, ಪಕ್ಷದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವರ ಕುಟುಂಬದಲ್ಲೇ ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಅವರ ಅಭಿಪ್ರಾಯ ತಪ್ಪು ಎಂದು ನಾನು ಹೇಳಕ್ಕಾಗಲ್ಲ. ಕುಟುಂಬದ ಒಬ್ಬರಿಗೆ ಅಭ್ಯರ್ಥಿತನ ಕೊಡ ಬೇಕು ಎಂದು ಅವರ ಅಭಿಪ್ರಾಯ. ನಾನು ಈವರೆಗೆ ಆಲೋಚನೆ ಮಾಡಿಲ್ಲ. ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ನಾಯಕರು ಕುಳಿತು ಈ ಬಗ್ಗೆ ತೀರ್ಮಾನಿಸುತ್ತಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News