ದೂರವಾದ ಪ್ರವಾಹ ಭೀತಿ; ಬಾಧಿತ ಪ್ರದೇಶಗಳಿಗೆ ಡಿಸಿ ಭೇಟಿ
ಉಡುಪಿ, ಜು.26: ಹವಾಮಾನ ಇಲಾಖೆ ಮಂಗಳವಾರ ತಡರಾತ್ರಿ ಹೊರಡಿಸಿದ ರಾಜ್ಯದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾದ ಕೆಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಬರುವ ಸಾಧ್ಯತೆಯ ಕುರಿತಂತೆ ನೀಡಿದ ಮುನ್ನೆಚ್ಚರಿಕೆ ಹುಸಿಯಾಗಿದ್ದು, ಇಂದು ಉಡುಪಿ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಷ್ಟೇ ಬಂದಿದೆ.
ಕೆಲಹೊತ್ತು ಜಿಲ್ಲೆಯ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯಿತಾದರೂ ಅದರಿಂದ ಹೆಚ್ಚಿನ ಪರಿಣಾಮ ಉಂಟಾಗಲಿಲ್ಲ. ಆದರೆ ಜಿಲ್ಲೆಯ ನದಿ ಗಳೆಲ್ಲವೂ ತುಂಬಿ ಹರಿಯುತ್ತಿವೆ. ಗಾಳಿಯೊಂದಿಗೆ ನಿರಂತರವಾಗಿ ಮಳೆ ಸುರಿದರೆ ರಾತ್ರಿಯ ವೇಳೆ ನದಿ ಅಪಾಯದ ಮಟ್ಟ ಮೀರಿ ತಗ್ಗುಪ್ರದೇಶ ಗಳೆಲ್ಲವೂ ಮತ್ತೆ ಜಲಾವ್ರತಗೊಳ್ಳುವ ಅಪಾಯವಿದೆ.
ಹವಾಮಾನ ಇಲಾಖೆ ನೀಡಿದ ರೆಡ್‌ಅಲರ್ಟ್ ಇಂದು ಬೆಳಗ್ಗೆ ಮುಕ್ತಾಯಗೊಂಡಿದ್ದು, ಇನ್ನೆರಡು ದಿನ ಜು.28ರವರೆಗೆ ಆರೆಂಜ್ ಅಲರ್ಟ್ ಇದ್ದು, ನಂತರ ಎಲ್ಲೋ ಅಲರ್ಟ್ ಇರಲಿದೆ.
ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಡಳಿತಕ್ಕೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದು, ಅದರಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರ ಭಾರೀ ಮಳೆಯಿಂದ ತೊಂದರೆಗೆ ಒಳಗಾದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿಯವರು ಬೈಂದೂರು ತಾಲೂಕಿನ ನಾವುಂದ, ಬಡಾಕೆರೆ, ಮರವಂತೆ, ತೆಗ್ಗರ್ಸೆ ಮುಂತಾದ ಕಡೆಗಳಿಗೆ ಭೇಟಿ ನೀಡಿದರು. ನಾವುಂದದಲ್ಲಿ ತೀವ್ರ ಮಳೆಯಿಂದ ನೆರೆ ಪೀಡಿತವಾಗಿರುವ ಪ್ರದೇಶ ಮತ್ತು ನೀರೋಡಿಯಲ್ಲಿ ಕಿರುಸೇತುವೆಗೆ ಹಾನಿಯಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೆರೆಬಾಧಿತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಕಂದಾಯ ಪರಿವೀಕ್ಷರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಜಿಲ್ಲಾಧಿಕಾರಿಗಳು ಕುಂದಾಪುರದ ತೆಕ್ಕಟ್ಟೆಯಲ್ಲಿರುವ ಸೈಕ್ಲೋನ್ ಶೆಲ್ಟರ್‌ಗೆ ಭೇಟಿ ನೀಡಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 94.8ಮಿ.ಮೀ. ಮಳೆ: ಬುಧವಾರ ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 94.8ಮಿ.ಮೀ. ಮಳೆಯಾಗಿದೆ. ಬೈಂದೂರಿ ನಲ್ಲಿ ಅತ್ಯಧಿಕ 113.1ಮಿ.ಮೀ., ಬೈಂದೂರಿನಲ್ಲಿ 97.0, ಕುಂದಾಪುರದಲ್ಲಿ 94.4, ಉಡುಪಿಯಲ್ಲಿ 92.5, ಕಾರ್ಕಳದಲ್ಲಿ 91.7, ಕಾಪುವಿನಲ್ಲಿ 86.0 ಹಾಗೂ ಬ್ರಹ್ಮಾವರದಲ್ಲಿ 84.7ಮಿ.ಮೀ. ಮಳೆಯಾಗಿದೆ.
30 ಮನೆಗಳಿಗೆ, 3 ಕೊಟ್ಟಿಗೆಗೆ ಹಾನಿ: ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 30 ಮನೆಗಳಿಗೆ ಹಾಗೂ ಮೂರು ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾದ ವರದಿಗಳು ಬಂದಿವೆ. ಇದರಿಂದ ಸುಮಾರು 9 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ತಾಲೂಕಿನಲ್ಲಿ ಮನೆಹಾನಿಯ 14 ಪ್ರಕರಣಗಳು ವರದಿಯಾಗಿದ್ದು ಮೂರು ಲಕ್ಷ ರೂ., ಕುಂದಾಪುರ ತಾಲೂಕಿನಲ್ಲಿ ನಾಲ್ಕು ಪ್ರಕರಣಗಳಲ್ಲಿ 2.75 ಲಕ್ಷ ರೂ., ಕಾಪುವಿನಲ್ಲಿ ಐದು ಪ್ರಕರಣಗಳಲ್ಲಿ 1.40 ಲಕ್ಷ ರೂ. ನಷ್ಟವಾಗಿದ್ದರೆ, ಬೈಂದೂರಿನಲ್ಲಿ ಮೂರು ಪ್ರಕರಣಗಳಲ್ಲಿ 75 ಸಾವಿರ, ಬ್ರಹ್ಮಾವರದ ಮೂರು ಪ್ರಕರಣಗಳಲ್ಲಿ 60 ಸಾವಿರ ಹಾಗೂ ಕಾರ್ಕಳದ ಎರಡು ಪ್ರಕರಣಗಳಿಂದ 10 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಗಿರಿಯ ಪಾಣ ಇವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಎರಡು ಲಕ್ಷ ರೂ.ಗಳ ನಷ್ಟ ಸಂಭವಿಸಿದೆ. ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ನಾಗರಾಜ ಇವರ ಮನೆಗೆ ಒಂದು ಲಕ್ಷ ರೂ. ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿವೆ.
ಕಳೆದ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ 9 ಮನೆಗಳು ಹಾಗೂ ಉದ್ಯಾವರದ ಒಂದು ಮನೆ ಭಾಗಶ: ಹಾನಿಗೊಳಗಾಗಿವೆ. ಉಳಿದ ಮನೆಗಳ ಮೇಲೆ ಮರಬಿದ್ದು ಹಾನಿಗೊಳಗಾಗಿವೆ.
ಬೈಂದೂರು ತಾಲೂಕಿನ ಕಾಲ್ತೋಡುನ ಎರಡು ಹಾಗೂ ಪಡುವರಿ ಗ್ರಾಮದ ಒಂದು ದನದ ಕೊಟ್ಟಿಗೆಗಳ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದ್ದು ಒಟ್ಟಾರೆಯಾಗಿ 75,000ರೂ. ನಷ್ಟ ಸಂಭವಿಸಿದೆ.