ಗ್ರಾಪಂ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ: ಮಂಜುನಾಥ್ ಭಂಡಾರಿ

Update: 2023-09-12 14:12 GMT

ಉಡುಪಿ, ಸೆ.12: ಗೌರವಧನ ಹೆಚ್ಚಳ ಸೇರಿದಂತೆ ಗ್ರಾಪಂ ಮಟ್ಟದ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳನ್ನು ಸರಕಾರ ಗಮನ ಸೆಳೆಯಬೇಕಾಗಿದೆ. ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅ.4ರಂದು ಉಡುಪಿ ಜಿಲ್ಲೆಗೆ ಆಗಮಿಸಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಗ್ರಾಪಂ ಸದಸ್ಯರುಗಳ ಸಭೆ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಮಾಜಿ ಉಪಾಧ್ಯಕ್ಷರು ಅಧ್ಯಕ್ಷರುಗಳಿಗೆ ಮಂಗಳವಾರ ಉಡುಪಿ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮಗೆ ಸಿಕ್ಕ ಅಧಿಕಾರವನ್ನು ಸರಿಯಾಗಿ ಚಲಾವಣೆ ಮಾಡಿ ಗ್ರಾಮ ಅಭಿವೃದ್ಧಿ ಮಾಡಬೇಕು. ಗ್ರಾಮ ಮಟ್ಟದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರೇ ಸಿಎಂ, ಡಿಸಿಎಂ ಆಗಿರುತ್ತಾರೆ. ಜನರ ಕೈಗೆ ನೇರವಾಗಿ ಸಿಗುವ ಜನಪ್ರತಿನಿಧಿಗಳೆಂದರೆ ಗ್ರಾಪಂ ಸದಸ್ಯರುಗಳು. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಗ್ರಾಪಂ ಸದಸ್ಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದ.ಕ. ಜಿಲ್ಲಾಧ್ಯಕ್ಷ ಸುಭಾಸ್‌ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆಪಿಸಿಸಿ ವಕ್ತಾರ ವೆರೋನಿಕಾ ಕರ್ನೇಲಿಯೋ, ಬಿ.ನರಸಿಂಹಮೂರ್ತಿ, ನಾಗೇಶ್ ಉದ್ಯಾವರ, ದಿನೇಶ್ ಪುತ್ರನ್, ಕುಶಾಲ್ ಶೆಟ್ಟಿ, ಗೀತಾ ವಾಗ್ಳೆ, ಅಣ್ಣಯ್ಯ ಸೇರಿಗಾರ್, ಜಯರಾಮ್, ಶಶಿಧರ್ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಮದನ್ ಕುಮಾರ್, ಪ್ರದೀಪ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಶಂಕರ್ ಕುಂದರ್, ದಿನಕರ್ ಹೇರೂರು, ರಮೇಶ್ ಕಾಂಚನ್, ಸದಾಶಿವ ದೇವಾಡಿಗ, ನವೀನ್‌ಚಂದ್ರ ಸುವರ್ಣ, ಹರೀಶ್ ಕಿಣಿ, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶಿನಿ ಒಲಿವರಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‘ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತಿದೆ ಎಂಬ ಆರೋಪಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಸಿಗುವ ಹಣ ಯಾವುದೇ ಸ್ವಿಸ್ ಬ್ಯಾಂಕ್‌ನಲ್ಲಿ ಇರಲ್ಲ. ಅದರ ಬದಲು ಆ ಹಣ ಜನರ ಮಧ್ಯೆಯೇ ಹರಿದಾಡಿ ಸರಕಾರಕ್ಕೆ ತೆರಿಗೆ ರೂಪದಲ್ಲಿ ವಾಪಾಸ್ಸು ಬರುತ್ತದೆ. ಇದರಿಂದ ಗ್ರಾಪಂ ಮಟ್ಟದಲ್ಲಿ ಹಣಕಾಸಿನ ವ್ಯವಹಾರ ಶೇ.5ರಷ್ಟು ಜಾಸ್ತಿ ಆಗುತ್ತದೆ. ಗ್ಯಾರಂಟಿ ಯೋಜನೆಯಿಂದ ಸರಕಾರ ದಿವಾಳಿ ಆಗಲ್ಲ. ನಮ್ಮದು ಸ್ಟ್ರಾಂಗ್ ಸರಕಾರ’

-ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸದಸ್ಯರು


 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News