‘ವರ್ಷದ ಶ್ರೇಷ್ಠ ವಿವಿ’ ಮಾಹೆಗೆ ಎಫ್‌ಐಸಿಸಿಐ ಪ್ರಶಸ್ತಿ

Update: 2024-10-19 16:48 GMT

ಉಡುಪಿ, ಅ.19: ಉನ್ನತ ಶಿಕ್ಷಣಕ್ಕಿರುವ ‘ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ’ದ ಪ್ರತಿಷ್ಠಿತ ಎಫ್‌ಐಸಿಸಿಐ 2024ನೇ ಸಾಲಿನ ಪ್ರಶಸ್ತಿಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಗೆದ್ದುಕೊಂಡಿದೆ.

ಹೊಸದಿಲ್ಲಿಯ ಅಂಬೇಡ್ಕರ್ ಇಂಟರ್‌ನೇಶನಲ್ ಸೆಂಟರ್‌ನಲ್ಲಿ ನಡೆದ 19ನೇ ಎಫ್‌ಐಸಿಸಿಐಐ ಉನ್ನತ ಶಿಕ್ಷಣ ಶೃಂಗಸಭೆಯಲ್ಲಿ ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್ ಆಗಿರುವ ಲಿಂಡಿ ಕ್ಯಾಮರೂನ್ ಅವರು ಮಾಹೆ ವಿವಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಎಫ್‌ಐಸಿಸಿಐಯ ಮಹಾ ನಿರ್ದೇಶಕಿ ಜ್ಯೋತಿ ವಿಜ್, ಸಿಂಬೋಸಿಸ್ ಅಂತಾರಾಷ್ಟ್ರೀಯ ವಿವಿಯ ಪ್ರೊ ಚಾನ್ಸಲರ್ ವಿದ್ಯಾ ಯರ್ವಾಡ್ಕರ್ ಉಪಸ್ಥಿತರಿದ್ದರು.

ಮಾಹೆ ಪರವಾಗಿ ಪ್ರೊ ವೈಸ್ ಚಾನ್ಸಲರ್ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ ಸಭಾಹಿತ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರೊಂದಿಗೆ ಎಂಐಟಿ ಮಣಿಪಾಲದ ಪ್ರೊ. ವಿನೋದ್ ಕಾಮತ್, ಟ್ಯಾಪ್ಮಿ ಮಣಿಪಾಲದ ಡಾ.ಗುರುದತ್ ನಾಯಕ್, ಮಾಹೆ ಮಣಿಪಾಲದ ಹಿಲ್ಡಾ ಕರ್ನೆಲಿಯೊ, ಮಾಹೆ ಮಣಿಪಾಲದ ಮಾರ್ಕೆಟಿಂಗ್ ಸಹಾಯಕ ನಿರ್ದೇಶಕಿ ಅರ್ಚನಾ ನಾಯಕ್ ಮತ್ತು ಮಾಹೆ ಬೆಂಗಳೂರಿನ ಸಹಾಯಕ ನಿರ್ದೇಶಕಿ ದಿವ್ಯದರ್ಶಿನಿ ಕೆ ಉಪಸ್ಥಿತರಿದ್ದರು.

ಮಾಹೆ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿರುವ ಬಗ್ಗೆ ತಮ್ಮ ಹರ್ಷವನ್ನು ಹಂಚಿಕೊಂಡ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆಯಲ್ಲಿ ನಾವು ಜ್ಞಾನವನ್ನು ನೀಡುವುದರ ಜೊತೆಗೆ ಜಗತ್ತಿನಲ್ಲಿ ಮಹತ್ವದ ಬದಲಾವಣೆ ತರಬಲ್ಲ ವ್ಯಕ್ತಿಗಳನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತಿದ್ದೇವೆ. ಈ ಪ್ರಶಸ್ತಿ ನಮ್ಮ ಮೌಲ್ಯಗಳನ್ನು, ಸಂಸ್ಥೆಯನ್ನು ಮುನ್ನಡೆಸುವ ನಮ್ಮ ದೃಷ್ಟಿಕೋನ ಮತ್ತು ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ನಮ್ಮ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಈ ಸಾಧನೆಯನ್ನು ಅರ್ಪಿಸುತ್ತೇವೆ ಎಂದರು.

ಮಾಹೆಯ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಸಂಸ್ಥೆಯ ಸಾಧನೆಗೆ ಹೆಮ್ಮೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿ ಈ ಪ್ರಶಸ್ತಿಯು ಪ್ರತಿಯೊಬ್ಬ ಸದಸ್ಯರ ಅವಿರತ ಶ್ರೇಷ್ಠತೆಯ ಅನ್ವೇಷಣೆಗೆ ಸಾಕ್ಷಿಯಾಗಿದೆ. ಮಾಹೆ, ಸಮುದಾಯದ ನಾವೀನ್ಯತೆ, ಸಂಶೋಧನೆ ಮತ್ತು ಶೈಕ್ಷಣಿಕ ಪ್ರತಿಭೆಯನ್ನು ಬೆಳೆಸುವ ನಮ್ಮ ಬದ್ಧತೆಯು ಎಫ್‌ಐಸಿಸಿಐ ಮೂಲಕ ಗುರುತಿಸಲ್ಪಟ್ಟಿರುವುದಕ್ಕೆ ನಾವು ಅಪಾರ ಹೆಮ್ಮೆಪಡುತ್ತೇವೆ. ಈ ಪುರಸ್ಕಾರವು ಉನ್ನತ ಶಿಕ್ಷಣದಲ್ಲಿ ಹೊಸ ಮಾನದಂಡಗಳನ್ನುಸ್ಥಾಪಿಸಲು ನಮಗೆ ಸ್ಫೂರ್ತಿ ನೀಡಲಿದೆ ಎಂದರು.

ಶೈಕ್ಷಣಿಕ ಉತ್ಕೃಷ್ಟತೆ, ನವೀನ ಅಭ್ಯಾಸಗಳು, ಅಧ್ಯಾಪಕರ ಅಭಿವೃದ್ಧಿ, ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ ಮತ್ತು ಸಮಾಜದ ಬೆಳವಣಿಗೆಗೆ ಕೊಡುಗೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಪ್ರದರ್ಶಿಸುವ ವಿಶ್ವವಿದ್ಯಾಲಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಸಂಶೋಧನೆ, ಜಾಗತಿಕ ಸಹಯೋಗಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾಹೆಯ ನಿರಂತರ ದಾಪುಗಾಲುಗಳು ಈ ಪ್ರತಿಷ್ಠಿತ ಪುರಸ್ಕಾರವನ್ನು ಗಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ ಎಂದು ಮಾಹೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News