ವಿಶೇಷ ಒಲಿಂಪಿಕ್ಸ್‌ನಲ್ಲಿ ಮಣಿಪಾಲ ಆಸರೆಯ ಕವಿತಾಗೆ ಚಿನ್ನದ ಪದಕ
ಮಣಿಪಾಲ, ಸೆ.14: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೆ.1ರಿಂದ 5ರವರೆಗೆ ನಡೆದ ವಿಶೇಷ ಒಲಿಂಪಿಕ್ಸ್‌ನ ರಾಷ್ಟ್ರೀಯ ಬಾಚೀ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯ ಬಾಚೀ ತಂಡವು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಚಿನ್ನದ ಪದಕ ಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಯಶಸ್ಸು ಸಾಧಿಸಿದೆ.
ರಾಜ್ಯದ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಲ್ಲಿ ಕಳೆದ 15 ವರ್ಷಗಳಿಂದ ಮಣಿಪಾಲ ಮಾಹೆಯ ಆಸರೆ ನಿವಾಸಿಯಾಗಿ ರುವ ಮೈಸೂರು ಜಿಲ್ಲೆ ಹುಣಸೂರು ಮೂಲದ ಕವಿತಾ ಅವರು ಸೇರಿದ್ದಾರೆ. ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಜುಲೈ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನ ರಾಜ್ಯ ಮಟ್ಟದ ಬಾಚೀ ಸ್ಪರ್ಧೆಯಲ್ಲಿ ಭಾಗವಹಿ ಉತ್ತಮ ಪ್ರದರ್ಶನ ತೋರುವ ಮೂಲಕ ಕವಿತಾ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾದರು. ಈ ಮೂಲಕ ಅವರು ಗ್ವಾಲಿಯರ್‌ನಲ್ಲಿ ನಡೆದ ರಾಷ್ಟ್ರೀಯ ಬಾಚೀ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಎರಡು ಚಿನ್ನದ ಪದಕಗಳನ್ನು ಗೆದ್ದರು.
ಕವಿತಾ ಈಗ ನಿವಾಸಿಯಾಗಿರುವ ಮಣಿಪಾಲದ ಆಸರೆ, ಮಾನಸಿಕ ಅಸ್ವಸ್ಥ ನಾಗರಿಕರಿಗೆ ಸಹಾಯ ಮಾಡಲು ಮೀಸಲಾಗಿರುವ ಸಂಸ್ಥೆಯಾಗಿದೆ. ವಿವಿಧ ಕಾರಣಗಳಿಂದಾಗಿ ಮಾನಸಿಕ ಬೆಳವಣಿಗೆಯಲ್ಲಿ ಸವಾಲುಗಳನ್ನು ಎದುರಿಸುತ್ತಿ ರುವವರಿಗೆ ಅಗತ್ಯ ಬೆಂಬಲವನ್ನು ನೀಡುವ ಉದ್ದೇಶದಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಅರ್ಚನಾ ಟ್ರಸ್ಟ್ ಜಂಟಿಯಾಗಿ ಇದನ್ನು ಸ್ಥಾಪಿಸಿದೆ.
ಕವಿತಾ ಅವರ ಈ ಗೆಲವು ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲದೇ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳನ್ನು ಬೆಂಬಲಿಸುವಲ್ಲಿ ಆಸರೆಯ ಸಬಲೀಕರಣ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ತಂಡದ ಅತ್ಯುತ್ತಮ ಪ್ರದರ್ಶನ ದಿಂದ ನಾವು ರೋಮಾಂಚನಗೊಂಡಿದ್ದೇವೆೆ ಎಂದು ವಿಶೇಷ ಒಲಿಂಪಿಕ್ಸ್ ಭಾರತ್ ಕರ್ನಾಟಕ ಸಮಿತಿಯ ಸದಸ್ಯರು ಹೇಳಿದರು.