ಕೊಂಡದಕುಳಿಗೆ ಗುರು ಎಂ.ವೀರಭದ್ರ ನಾಯಕ್ ಯಕ್ಷ ಪ್ರಶಸ್ತಿ

Update: 2023-08-10 15:26 GMT

ಉಡುಪಿ, ಆ.10: ಬೇಳಿಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ 2023ನೇ ಸಾಲಿನ ಪ್ರತಿಷ್ಠಿತ ಯಕ್ಷ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಗೆ ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಉಡುಪಿಯ ಯಕ್ಷಗಾನ ಕೇಂದ್ರದ ಸಹಯೋಗದಲ್ಲಿ ನೀಡಲಾಗುವ ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಆಗಸ್ಟ್ 12ರಂದು ಅಜ್ಜರಕಾಡಿನ ಪುರಭವನದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಹಯೋಗದಲ್ಲಿ ನಡೆ ಯುವ ಯಕ್ಷಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ನೀಡಿಗೌರಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡಗುತಿಟ್ಟು ಯಕ್ಷಗಾನ ಪ್ರಪಂಚದ ಅಗ್ರಮಾನ್ಯ ಕಲಾವಿದರಾಗಿ ಖ್ಯಾತರಾಗಿರುವ ರಾಮಚಂದ್ರ ಹೆಗಡೆ ಕೊಂಡದಕುಳಿಯಲ್ಲಿ 1961ರಲ್ಲಿ ಜನಿಸಿದರು. ಇವರ ತಾತ ರಾಷ್ಟ್ರಪ್ರಶಸ್ತಿ ವಿಜೇತ ದಿ.ಕೊಂಡದಕುಳಿ ರಾಮ ಹೆಗಡೆ ಇವರಲ್ಲಿ ಯಕ್ಷಗಾನ ಕಲಿಕೆ ಆರಂಭಿಸಿದ್ದು ಎಸೆಸೆಲ್ಸಿ ವಿದ್ಯಾಭ್ಯಾಸದ ಬಳಿಕ ‘ಗುಂಡಬಾಳಮೇಳ’ದ ಕಲಾದರಾಗಿ ಅಯ್ಕೆ ಯಾದರು. ಇವರು ಸುಮಾರು ಹದಿನೆಂಟು ವರುಷಗಳ ಕಾಲ ಸಾಲಿಗ್ರಾಮ ಮೇಳ ದಲ್ಲಿ, ನಂತರ ‘ಪಂಚಲಿಂಗೇಶ್ವರ ಮೇಳ’ದಲ್ಲಿ ಯಶಸ್ವಿ ಕಲಾವಿದರಾಗಿ ಗುರುತಿಸಿಕೊಂಡರು.

2000ನೇ ಇಸವಿಯಲ್ಲಿ ಸ್ವತಹ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ (ರಿ) ಕುಂಭಾಶಿ ಎನ್ನುವ ಸಂಸ್ಥೆ ಯನ್ನು ಸ್ಥಾಪಿಸಿ ಅನೇಕ ಕಲಾವಿದರನ್ನು ಗುರುತಿಸಿ ಗೌರವಿಸಿದರು. ಯಕ್ಷಗಾನದಲ್ಲಿ ರಾಮ, ಭೀಮ, ಹನುಮ, ವಾಲಿ, ಸುಗ್ರೀವ, ದುಷ್ಟಬುದ್ಧಿ, ಮಾಗದ, ಕೃಷ್ಣ, ಈಶ್ವರ, ಅಭಿಮನ್ಯು, ಸಾಲ್ವ ಮೊದಲಾದ ನೂರಾರು ಪುರುಷಪಾತ್ರ ಅಲ್ಲದೆ ಮೋಹಿನಿ, ಮೇನಕೆ, ಚಂದ್ರಾವಳಿ, ಚಿತ್ರಾಕ್ಷಿ ಈ ಬಗೆಯ ಸ್ತ್ರೀಪಾತ್ರಗಳನ್ನೂ ನಿರ್ವಹಿಸಿ ಜನಪ್ರಿಯತೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News