ಕಾನೂನು ಬದಲಾವಣೆ ಬಗ್ಗೆ ಸ್ಪಷ್ಟ ತಿಳುವಳಿಕೆ ಹೊಂದಿ: ಎ.ಬಿ.ಶೆಟ್ಟಿ
ಕುಂದಾಪುರ, ಆ.30: ಹೊಸದಾಗಿ ಜಾರಿಯಾದ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು ಐಪಿಸಿ ಹಾಗೂ ಬಿಎನ್‌ಎಸ್‌ನ ಅಂಶಗಳ ಸರಿಯಾದ ತಿಳಿವಳಿಕೆ ಇಟ್ಟುಕೊಂಡಾಗ ಸುಲಭದಲ್ಲಿ ವಾದ ಮಂಡನೆ ಸಾಧ್ಯ ವಾಗಲಿದೆ ಎಂದು ಹಿರಿಯ ನ್ಯಾಯವಾದಿ ಎ.ಬಿ. ಶೆಟ್ಟಿ ಹೇಳಿದ್ದಾರೆ.
ಕಳೆದ ಜು.1ರಿಂದ ಭಾರತದಲ್ಲಿ ನೂತನವಾಗಿ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಕುರಿತು ಅವರು ಕುಂದಾಪುರ ವಕೀಲರ ಸಂಘದ ಆಶ್ರಯದಲ್ಲಿ ಸಂಘದ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ್, ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜುಳಾ ಬಿ., 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಶ್ರುತಿಶ್ರೀ, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ರೋಹಿಣಿ ಡಿ., ಸಹಾಯಕ ಸರಕಾರಿ ಅಭಿಯೋಜಕರಾದ ಉದಯ ಕುಮಾರ್ ಹಾಗೂ ಉಮಾ ಮುಖ್ಯ ಅತಿಥಿಯಾಗಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಕೆಇಆರ್‌ಸಿ ಸದಸ್ಯ ಎಚ್. ಕೆ. ಜಗದೀಶ ಭಾಗವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಹಂದಟ್ಟು ಪ್ರಮೋದ ಹಂದೆ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ, ಮಂಜುನಾಥ ಆರ್. ಅರಾಟೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ ವಂದಿಸಿದರು.