ಹೆಬ್ರಿ | ಬಸ್ಸನ್ನು ಆಸ್ಪತ್ರೆಗೆ ಒಯ್ದು ಅಸ್ವಸ್ಥ ಯುವತಿಯ ಜೀವ ಉಳಿಸಿದ ಸರಕಾರಿ ಬಸ್ ಸಿಬ್ಬಂದಿ

Update: 2024-10-01 04:23 GMT

ಹೆಬ್ರಿ: ಪ್ರಯಾಣಿಕ ಯುವತಿಯೊಬ್ಬಳು ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಸಿಬ್ಬಂದಿ ಬಸ್ಸನ್ನು ನೇರವಾಗಿ ಹೆಬ್ರಿಯ ಸರಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ಕೊಂಡೊಯ್ದು ಆಕೆಯ ಚಿಕಿತ್ಸೆ ಕೊಡಿಸಿದ ಘಟನೆ ಸೋಮವಾರ ಸಂಜೆ ಹೆಬ್ರಿಯಲ್ಲಿನಡೆದಿದೆ.

ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಮೇಗರವಳ್ಳಿಯಲ್ಲಿ ಸುರಕ್ಷಾ ಎಂಬವರು ಏರಿದ್ದರು. ಆಗುಂಬೆ ಘಾಟಿ ತಲುಪುವಷ್ಟರಲ್ಲಿ ಸುರಕ್ಷಾ ತೀವ್ರ ಅಸ್ವಸ್ಥಗೊಂಡರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕ ವಾಸಿಮ್ ದೇಸಾಯಿ ಸಹಾಯಕ್ಕೆ ಧಾವಿಸಿದ್ದು, ಚಾಲಕ ತಾರೇಶ್ ಬಸ್ಸನ್ನು ನೇರವಾಗಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಸುರಕ್ಷಾರ  ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲಿ. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಸ್ ಸಿಬ್ಬಂದಿ ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಗೆ ಕರೆತಂದಿದ್ದಾರೆ. ಈ ವೇಳೆ ಹೆಬ್ರಿ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಪೊಲೀಸರು ಸೋಮೇಶ್ವರ ದಿಂದ ಹೆಬ್ರಿಯ ಆಸ್ಪತ್ರೆಯ ತನಕ ಟ್ರಾಫಿಕ್ ಸಮಸ್ಯೆ ಆಗದಂತೆ ಸಹಕರಿಸಿದ್ದಾರೆ. ಸುರಕ್ಷಾರನ್ನು ಹೆಬ್ರಿ ಸರಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಬಸ್ ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಅವರ ಮಾನವೀಯ ಕಳಕಳಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

-----------

ನನ್ನ ಮಗಳನ್ನು ಕಾಪಾಡಿದ ಬಸ್ ಸಿಬ್ಬಂದಿಗೆ ಮನಪೂರ್ವಕ ಕೃತಜ್ಞತೆ. ಉಸಿರಿರುವವರೆಗೆ ಅವರನ್ನು ನೆನಪು ಮಾಡುತ್ತೇನೆ. ಮುನಿಯಾಲಿನಲ್ಲಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ನನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಳು.

-ರೇಖಾ, ಸುರಕ್ಷಾರ ತಾಯಿ

.................

ಬಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಮಾನವೀಯತೆ ಮೆರೆದಿದ್ದರಿಂದ ಯುವತಿಯೊಬ್ಬಳ ಜೀವ ಉಳಿದಿದೆ. ಇಂತಹ ಕೆಲಸಗಳು ಸಮಾಜಕ್ಕೆ ಮಾದರಿಯಾಗಬೇಕು.

ಮಹೇಶ್ ಟಿಎಂ, ಹೆಬ್ರಿ ಪಿಎಸ್ಸೈ

Full View

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News