ಹಿರಿಯಡ್ಕ: ವೃದ್ಧೆಯ ಮುಖಕ್ಕೆ ಮುಸುಕು ಹಾಕಿ ಚಿನ್ನದ ಸರ ಸುಲಿಗೆ; ಆರೋಪಿ ಬಂಧನ

Update: 2023-10-13 11:23 GMT

ಹಿರಿಯಡ್ಕ, ಅ.13: ಎರಡು ದಿನಗಳ ಹಿಂದೆ ಪೆರ್ಡೂರಿನಲ್ಲಿ ನಡೆದ ವಯೋವೃದ್ಧೆಯ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೆರ್ಡೂರಿನ ಉಲ್ಲಾಸ್ ವಿಶ್ವನಾಥ್ ಶೆಟ್ಟಿ(48) ಬಂಧಿತ ಆರೋಪಿ. ಈತ ನಿಂದ ಸುಲಿಗೆ ಮಾಡಿದ 25 ಗ್ರಾಂ ತೂಕದ 88,000ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಈತ ನೆರೆಮನೆಯ 80ವರ್ಷ ವಯಸ್ಸಿನ ವಯೋವೃದ್ಧೆ ಮನೆಯ ಹೊರಗಿನ ಬಟ್ಟೆ ಒಗೆಯುವ ಕಲ್ಲಿನ ಬಳಿ ಪಾತ್ರೆ ತೊಳೆಯುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಉಲ್ಲಾಸ್, ಅವರ ಮುಖಕ್ಕೆ ಅವರ ಸೀರೆಯ ಸೆರಗನ್ನು ಮುಸುಕು ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದನು ಎನ್ನಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದ ತಂಡ ಆರೋಪಿಯನ್ನು ಪೆರ್ಡೂರಿನಲ್ಲಿ ಬಂಧಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಆರೋಪಿ, ಚಿಕಿತ್ಸೆ ಪಡೆಯಲು ಹಣಕ್ಕಾಗಿ ಈ ಕೃತ್ಯ ಎಸಗಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News