ಮಣಿಪಾಲದ ಪಬ್ ಗಳಿಗೆ ದಾಳಿ ಮಾಡಿದರೆ ಬಿಜೆಪಿಯವರು ಹೇಗೆ ಟಾರ್ಗೆಟ್ ಆಗುತ್ತಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

Update: 2023-08-14 10:11 GMT

ಉಡುಪಿ, ಆ.14: ಮಣಿಪಾಲದಲ್ಲಿನ ಪಬ್ ಗಳ ವಿರುದ್ಧ ಪೊಲೀಸರು ಹಾಗೂ ಅಬಕಾರಿ ಇಲಾಖೆ ನಡೆಸಿರುವ ಕಾರ್ಯಾಚರಣೆ ಯಾರನ್ನು ಗುರಿ ಮಾಡುವ ಉದ್ದೇಶದಿಂದಲ್ಲ. ಎಲ್ಲದಕ್ಕೂ ಒಂದು ನಿಯಮ ಹಾಗೂ ಸಮಯ ನಿಗದಿಯಾಗಿರುತ್ತದೆ. ಅದನ್ನು ಉಲ್ಲಂಘಿಸಿದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಯಾರೂ ವಿರೋಧ ಮಾಡುವುದಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಬಿಜೆಪಿಯವರನ್ನು ಟಾರ್ಗೆಟ್ ಮಾಡಿ ಮಣಿಪಾಲದಲ್ಲಿ ಪಬ್ ಮೇಲೆ ದಾಳಿ ನಡೆಸಲಾಗುತ್ತದೆ ಎಂಬ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉಡುಪಿ ಯಲ್ಲಿಂದು ಪ್ರತಿಕ್ರಿಯಿಸಿದ ಸಚಿವರು, ಪಬ್, ಹೋಟೆಲ್ ಗಳಿಗೆ ದಾಳಿ ಮಾಡಿದರೆ ಬಿಜೆಪಿಗೆ ಏನು ಸಂಬಂಧ. ಬಿಜೆಪಿಯವರು ಹೇಗೆ ಟಾರ್ಗೆಟ್ ಆಗುತ್ತಾರೆ ಎಂಬುದನ್ನು ಬಿಡಿಸಿ ಹೇಳಿ ಎಂದು ಮರುಪ್ರಶ್ನಿಸಿದರು.

ಪಬ್ ಗಳು ಬಿಜೆಪಿ ನಾಯಕರ ಮಾಲಕತ್ವದ್ದು ಎಂಬುದನ್ನು ಅರಿತ ಸಚಿವರು, ಕಾಂಗ್ರೆಸ್ ಯಾರನ್ನು ಕೂಡ ಗುರಿ ಮಾಡುತ್ತಿಲ್ಲ. ಅಂತಹ ಅನಿವಾರ್ಯ ಸ್ಥಿತಿ ಕಾಂಗ್ರೆಸ್ ಸರಕಾರಕ್ಕೆ ಬಂದಿಲ್ಲ ಎಂದರು.

ವಿಶೇಷ ತನಿಖಾ ತಂಡ ರಚನೆ, ಕಮಿಷನ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಳೆದ ಮೂರು ತಿಂಗಳಲ್ಲಿ ನಮ್ಮ ಸರಕಾರ ಯಾವುದೇ ಹೊಸ ಯೋಜನೆ ಮಾಡಿಲ್ಲ. ಹೊಸ ಯೋಜನೆಗಳನ್ನು ಮಾಡಿದರೆ ಮಾತ್ರ ಕಮಿಷನ್ ವಿಚಾರ ಬರುತ್ತದೆ. ಈ ಹಿಂದಿನ ಸರಕಾರದ  ಕಾಮಗಾರಿಗಳು ನಡೆಯುತ್ತಿರುವಾಗ ಕಮಿಷನ್ ವಿಚಾರ ಎಲ್ಲಿಂದ ಬರುತ್ತದೆ. ನಾವು ಕಮಿಷನ್ ಕೇಳಿರುವ ಯಾವುದೇ ಪ್ರಕರಣಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ವಿಚಾರದಲ್ಲಿ ಬಂದಿರುವ ಆರೋಪ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಬೋಗಸ್ ಬಿಲ್ ಆಗಿದೆಯಾ ಎಂದು ತನಿಖಾ ತಂಡ ವಿಚಾರಣೆ ಮಾಡುತ್ತದೆ. ಒಂದು ಕಿಲೋಮೀಟರ್ ಕೆಲಸಕ್ಕೆ 10 ಕಿ.ಮೀ. ಎಂದು ಬಿಲ್ ಕೊಟ್ಟಿದ್ದಾರೆ. ಕೇವಲ 24 ಗಂಟೆಯಲ್ಲಿ ಮಂಜೂರಾಗುತ್ತದೆ ಮತ್ತು ಕೆಲಸವೂ ಮುಗಿಯುತ್ತದೆ. ಇದು ಸಾಧ್ಯವೇ? ಸಮರ್ಪಕವಾಗಿ ಕೆಲಸ ಮಾಡಿದವರಿಗೆ ಬಿಲ್ ಪಾವತಿಯಾಗುತ್ತದೆ ಎಂದರು.

ಬಿಜೆಪಿ ಸಾಲ ಮಾಡಿ ಹೋಗಿದೆ ಬೊಕ್ಕಸದ ಸ್ಥಿತಿ ಎಲ್ಲರಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಆರ್ಥಿಕ ತಜ್ಞ ಎಂದು ನಾವು ಕರೆಯುತ್ತೇವೆ. ಯಾರಿಗೂ ಹೊರೆಯಾಗದಂತೆ ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಅವರು ಹೇಳಿದರು.

ಭಾರಿ ಚರ್ಚೆಯಲ್ಲಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, ಮೊದಲ ಬಾರಿ ಸ್ವಾತಂತ್ರೋತ್ಸವದ ಧ್ವಜಾರೋಹಣಕ್ಕೆ ಉಡುಪಿಗೆ ಬಂದಿದ್ದೇನೆ. ಈ ವಿಚಾರದ ಕುರಿತು ನಾನು ನಾಳೆ ಮಾತನಾಡುತ್ತೇನೆ ಎಂದು ಹೇಳಿದರು.

‘ಸಿಐಡಿ ತನಿಖೆ ಪ್ರಗತಿಯಲ್ಲಿ’

ಉಡುಪಿ ವಿಡಿಯೋ ಪ್ರಕರಣದ ಸಿಐಡಿ ತನಿಖೆ ಯಾವ ಹಂತದಲ್ಲಿದೆ ಎಂದು ಹೇಳಲು ಆಗಲ್ಲ. ಸಿಐಡಿ ತಂಡ ಕಾಲೇಜಿಗೆ ಭೇಟಿ ಕೊಟ್ಟಿದೆ ಮತ್ತು ಸಂತ್ರಸ್ತೆಯ ಜೊತೆ ಮಾತುಕತೆ ನಡೆಸಿದೆ. ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ವಿಚಾರದಲ್ಲಿ ಸರಕಾರ, ಮುಖ್ಯಮಂತ್ರಿಗಳು, ಪೊಲೀಸ್ ಇಲಾಖೆ 24 ಗಂಟೆ ಅಲರ್ಟ್ ಆಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸಿಐಡಿ ತನಿಖೆ ಬಗ್ಗೆ ವಿಶ್ವಾಸವಿಲ್ಲ ಎಂದಿರುವ ಶಾಸಕ ಯಶ್ಪಾಲ್ ಸುವರ್ಣ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು,  ನಮ್ಮದು ಮಹಿಳೆಯರಿಗೆ ಮರ್ಯಾದೆ ಕೊಡುವ ಸರಕಾರ. ಯಾವುದೇ ಸಮಾಜ, ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಷ್ಪಕ್ಷಪಾತವಾದ ತನಿಖೆ ಮಾಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News