ಉಡುಪಿ ಜಿಲ್ಲಾಮಟ್ಟದ ಯುವ ಭಾರತ್ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
ಉಡುಪಿ, ಆ.15: ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ದಿಂದಾಗಿ ಪ್ರಜಾಪ್ರಭುತ್ವದ ಆಶಯಗಳು ಗಟ್ಟಿಯಾಗಿ ಭಾರತ ಇಂದಿಗೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುಂದುವರಿಯಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಆಶಯ ದಲ್ಲಿ ಆಡಳಿತ ಚುಕ್ಕಾಣಿಗಳು ನಡೆಯಬೇಕಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಲಾದ ಯುವ ಭಾರತ್ ಸಾಂಸ್ಕೃತಿಕ ಸ್ಪರ್ಧೆ-2023ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯ, ದೇಶದಲ್ಲಿ ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಬಂಡವಾಳವಾಗಿ ಟ್ಟುಕೊಂಡು ಕುತಂತ್ರ ರೂಪಿಸುತ್ತಿದೆ. ಅಖಂಡ ಭಾರತ ನಿರ್ಮಾಣಕ್ಕೆ ಮಹಿಳಾ ಸಶಕ್ತೀಕರಣ ಅತೀ ಅಗತ್ಯ. ಇದಕ್ಕೆ ಜಾತಿ, ಧರ್ಮ ಮೀರಿ ಕೆಲಸ ಮಾಡಬೇಕು ಎಂದ ಅವರು, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ದೇಶದ ಜನತೆಯನ್ನು ತಲೆತಗ್ಗಿಸುವಂತೆ ಮಾಡಿದೆ. ಇದೊಂದು ವ್ಯವಸ್ಥಿತ ಸಂಚು. ಈ ದೌರ್ಜನ್ಯ ಅಘಾತಕಾರಿ. ದೇಶದಲ್ಲಿ ಬೇರೆ ಬೇರೆ ಧರ್ಮ, ಜಾತಿ, ಸಂಸ್ಕೃತಿ ಒಳಪಟ್ಟಿದ್ದರೂ ವಿಭಿನ್ನತೆಯಲ್ಲಿ ಏಕತೆಯನ್ನು ಮೂಡಿಸಲಾಗುತ್ತಿತ್ತು ಎಂದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಎನ್‌ಎಸ್‌ಯುಐ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್ ಬಲ್ಲಾಳ್, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ ಹೇರೂರು, ಕೆಪಿಸಿಸಿ ಸಂಯೋಜಕ ನವೀನ್‌ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಅಮೃತ್ ಶೆಣೈ, ನಾಗೇಶ್ ಉದ್ಯಾವರ, ಮಮತಾ, ಬಿ. ಕುಶಾಲ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಬರೀಶ್ ಸುವರ್ಣ ಸ್ವಾಗತಿಸಿದರು. ಉಪಾಧ್ಯಕ್ಷೆ ಸುರಯ್ಯ ಅಂಜುಮ್ ಹಾಗೂ ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ಜಿಲ್ಲಾ ಇಂಟರ್ ಬ್ಲಾಕ್‌ನ ಕಾಂಗ್ರೆಸ್ ಮಟ್ಟದಲ್ಲಿ ಸಮೂಹ ಸಂಗೀತ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ, ಪ್ರಹಸನ ಸ್ಪರ್ಧೆಗಳು ನಡೆದವು.