ಬುಲ್ ಟ್ರಾಲ್, ಲೈಟ್ ಫಿಶಿಂಗ್ ಮೀನುಗಾರಿಕೆ ನಿಷೇಧಕ್ಕೆ ಆಗ್ರಹ: ತ್ರಾಸಿಯಲ್ಲಿ ನಾಡದೋಣಿ ಮೀನುಗಾರರ ಧರಣಿ ಆರಂಭ
ಕುಂದಾಪುರ: ಬುಲ್ ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ಮೊದಲಾದ ಅವೈಜ್ಞಾನಿಕ ಮೀನುಗಾರಿಕೆ ನಿಷೇಧ ಹಾಗೂ ಸೀಮೆಎಣ್ಣೆ ದರ ಕಡಿಮೆ ಮಾಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಇಂದು ತ್ರಾಸಿಯಲ್ಲಿ ಧರಣಿ ಆರಂಭಿಸಿದ್ದಾರೆ.
ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಾಡದೋಣಿ ಮೀನುಗಾರರು ತ್ರಾಸಿ ಸಮುದ್ರದಲ್ಲಿ ನಾಡದೋಣಿಗಳನ್ನಿಟ್ಟು ಸಮುದ್ರ ತೀರಕ್ಕೆ ಬಂದು ಧರಣಿ ನಡೆಸಲಿದ್ದಾರೆ.
ಶುಕ್ರವಾರ ಬೆಳಗ್ಗೆನಿಂದಲೇ ಗಂಗೊಳ್ಳಿ, ಬೈಂದೂರು ಭಾಗದ ಮೀನುಗಾರರು ದೋಣಿಗಳಲ್ಲಿ ಆಗಮಿಸುತ್ತಿದ್ದು, ಕಾರವಾರದಿಂದ ಮಂಗಳೂರು ತನಕದ ನಾಡದೋಣಿ ಮೀನುಗಾರರು ವಾಹನದ ಮೂಲಕ ಧರಣಿ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಪ್ರತಿಭಟನಾ ಸಭೆಯ ಬಳಿಕ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ.
ಧರಣಿಯ ಹಿನ್ನೆಲೆಯಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವೀತ್ರ ತೇಜ್, ಉಪವಿಭಾಗದ ಪೊಲೀಸ್ ನಿರೀಕ್ಷಕರು, ಉಪ ನಿರೀಕ್ಷಕರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.