ವಸಂತಕಲಾ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

Update: 2023-11-01 15:13 GMT

ಉಡುಪಿ: ಪರಿಪೂರ್ಣತೆಗಾಗಿ ಸದಾ ಹಾತೊರೆಯುವ ಮನಸ್ಸು, ಹೊಸತನ್ನು ಹುಡುಕುವ ಹಸಿವು, ಕಲಾ ಕಲಿಕೆಗೆ ಮುಕ್ತ ಮನಸ್ಸು ವಸಂತಲಕ್ಷ್ಮಿ ಅವರ ಕಲಾ ಸಾಧನೆಯ ಯಶಸ್ಸಿನ ಸೂತ್ರಗಳು ಎಂದು ಮುಂಬಯಿಯ ಖ್ಯಾತ ಚಿತ್ರಕಲಾವಿದೆ ಶರ್ಮಿಳಾ ಗುಪ್ತೆ ಹೇಳಿದ್ದಾರೆ.

ನ.1ರಂದು ಕುಂಜಿಬೆಟ್ಟು ಅದಿತಿ ಗ್ಯಾಲರಿಯಲ್ಲಿ ಪ್ರಾರಂಭಗೊಂಡ ವಸಂತ ಕಲಾ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲಾ ಶಿಷ್ಯೆಯಾಗಿ ಅವರ ಸಾಧನೆ ಅವಿಸ್ಮರಣೀಯ. ವಸಂತಲಕ್ಷ್ಮೀ ಅವರ ಕಲಾಕೃತಿಗಳು ಶಾಶ್ವತವಾಗಿ ಜನಮಾನ ಸದಲ್ಲಿ ಉಳಿಯಲಿ ಎಂದು ಅವರು ಹಾರೈಸಿದರು.

ಉಡುಪಿ ದೃಷ್ಟಿ ಆರ್ಟ್ ಗ್ಯಾಲರಿಯ ಮುಖ್ಯಸ್ಥ ರಮೇಶ್ ರಾವ್ ಅವರು ಮಾತನಾಡಿ ವಸಂತಲಕ್ಷ್ಮಿ ಕೇವಲ ಚಿತ್ರ ಕಲಾವಿದೆ ಮಾತ್ರವಲ್ಲ ವರ್ಣಗಳ ಒಡನಾಟವನ್ನೂ ಸಮರ್ಪಕವಾಗಿ ಬಳಸಿಕೊಂಡಿದ್ದರು. ಅವರ ಕಲಾಕೃತಿಗಳು ಶಾಶ್ವತವಾಗಿ ವೀಕ್ಷಿಸಲು ಸಾಧ್ಯವಾಗುವ ಹಾಗೆ ಯೋಜನೆಗಳನ್ನು ರೂಪಿಸ ಬೇಕು ಎಂದು ಸಲಹೆ ನೀಡಿದರು.

ಕಲಾವಿದೆ ವಸಂತಲಕ್ಷ್ಮೀ ಅಕಾಲಿಕವಾಗಿ ಅಗಲಿದ ಒಂದು ವರ್ಷದಲ್ಲೇ ಅವರ ಚಿತ್ರಕಲಾ ಯಾತ್ರೆಯನ್ನು ಸಾರುವ ವಸಂತ ಕಲಾ ಚಿತ್ರಕಲಾ ಪ್ರದರ್ಶನವು ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ನಡೆಯುತಿದ್ದು, ಇಲ್ಲಿ ಅವರ ಸುಮಾರು ಎಪ್ಪತ್ತು ಕಲಾ ಕೃತಿಗಳು ಪ್ರದರ್ಶನಗೊಂಡಿವೆ.

ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ.ಕಿರಣ್ ಆಚಾರ್ಯ ಸ್ವಾಗತಿಸಿ, ರಾಜಮೋಹನ್ ವಾರಂಬಳ್ಳಿ ವಂದಿಸಿದರು. ರಂಜನಿ ಸ್ಮಾರಕ ಟ್ರಸ್ಟ್‌ನ ಅರವಿಂದ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮನ್ವಿ, ಅರ್ಚನಾ ಹಾಗೂ ಗಾರ್ಗಿ ಅತಿಥಿಗಳನ್ನು ಪರಿಚಯಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಲಾವಿದೆ ವಸಂತಲಕ್ಷ್ಮೀ ಅವರ ಕುರಿತು ನಿರ್ಮಿಸಲಾದ ವಿಡಿಯೋ ಪ್ರದರ್ಶನ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News