2030ರ ವೇಳೆಗೆ ಭಾರತಕ್ಕೆ ಹಡಗು ನಿರ್ಮಾಣದಲ್ಲಿ ವಿಶ್ವದ ಟಾಪ್ 10ರಲ್ಲಿ ಸ್ಥಾನ ಪಡೆಯುವ ಗುರಿ: ಮಧು ನಾಯರ್
ಮಲ್ಪೆ, ಡಿ.16: ಸದ್ಯ ಭಾರತ ಹಡಗು ನಿರ್ಮಾಣದಲ್ಲಿ ವಿಶ್ವದಲ್ಲಿ 17ನೇ ಸ್ಥಾನದಲ್ಲಿದೆ. ಹಡಗು ನಿರ್ಮಾಣದ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ 2030ರ ವೇಳೆಗೆ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಟಾಪ್ 10 ದೇಶದಲ್ಲಿ ಸ್ಥಾನ ಪಡೆಯುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸರಕಾರದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧು ಎಸ್.ನಾಯರ್ ತಿಳಿಸಿದ್ದಾರೆ.
ಕೊಚ್ಚಿನ್ ಶಿಪ್‌ಯಾರ್ಡ್‌ನ ಸಹಸಂಸ್ಥೆ ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಾರ್ವೆಯ ವಿಲ್ಸನ್ ಎಎಸ್‌ಎಗೆ ನಿರ್ಮಿಸಲಾದ 3800 ಟಿಡಿಡಬ್ಲ್ಯು ಸಾಮರ್ಥ್ಯದ ಸರಕು ಹಡಗುಗಳ ಸರಣಿಯ ಮೊದಲ ಹಡಗನ್ನು ಹಸ್ತಾಂತರಿಸುವ ಕಾರ್ಯಕ್ರಮದ ಕೊನೆಗೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ನೂರು ವರ್ಷಗಳಾಗುವ 2047ರ ಅಮೃತ ಕಾಲ ಮಿಷನ್‌ನಡಿ ಭಾರತವನ್ನು ವಿಶ್ವದ ಟಾಪ್ ಐದರೊಳಗೆ ತರುವ ಗುರಿಯನ್ನು ಸಹ ಹಾಕಿಕೊಳ್ಳಲಾಗಿದೆ. ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಯೋಜನೆಯಡಿ ಇಲ್ಲಿ ಜನಸ್ನೇಹಿ, ಪರಿಸ್ನೇಹಿಯಾದ ಹಸಿರು ಟಗ್‌ಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಇಲ್ಲಿ 1900 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಹಡಗು ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಕೊಚ್ಚಿನ್ ಶಿಪ್‌ಯಾರ್ಡ್ ಎಂಬುದು 52 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದ ಸದ್ಯ ದೇಶದ ಅಗ್ರಗಣ್ಯ ಹಗಡು ನಿರ್ಮಾಣ ಸಂಸ್ಥೆಯಾಗಿದೆ. ಇದು ಕೇಂದ್ರ ಸರಕಾರದ ಶೇ.65ರಷ್ಟು ಶೇರ್‌ಗಳನ್ನು ಹೊಂದಿದೆ. ಭಾರತೀಯ ನೌಕಾಪಡೆಗೆ ಐಎನ್‌ಎಸ್ ವಿಕ್ರಾಂತ್‌ನ್ನು ಇದು ನಿರ್ಮಿಸಿ ಕೊಟ್ಟಿದೆ. ಕೊಲ್ಕತ್ತಾ, ಮಲ್ಪೆಗಳಲ್ಲಿ ಇದರ ಸಹಸಂಸ್ಥೆಗಳಿದ್ದು, ಮಲ್ಪೆಯ ಶಿಪ್‌ಯಾರ್ಡ್‌ನಲ್ಲಿ ಶೇ.100 ಶೇರ್‌ನ್ನು ಕೊಚ್ಚಿನ್‌ಶಿಪ್‌ಯಾರ್ಡ್ ಹೊಂದಿದೆ ಎಂದರು.
ಕೊಚ್ಚಿನ್ ಶಿಪ್‌ಯಾರ್ಡ್ ಮುಂಬೈ, ಕೊಲ್ಕತ್ತಾ ಹಾಗೂ ಪೋರ್ಟ್‌ಬ್ಲೇರ್‌ಗಳಲ್ಲಿ ಹಡಗು ರಿಪೇರಿ ಕೇಂದ್ರಗಳನ್ನು ಹೊಂದಿದೆ. ಮಲ್ಪೆಯ ಇನ್ನೊಂದು ಶಾಖೆ ಹಂಗಾರಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸದ್ಯ ಮಲ್ಪೆ ಶಿಪ್‌ಯಾರ್ಡ್‌ನಲ್ಲಿ 650 ಹಾಗೂ ಹಂಗಾರಕಟ್ಟೆಯಲ್ಲಿ 220 ಮಂದಿ ಕಾರ್ಯನಿರ್ವಹಿಸುತಿದ್ದಾರೆ. ಇದರ ವಿಸ್ತರಣೆ ಯೋಜನೆ ಸಿದ್ಧವಾಗಿದ್ದು, ಅದು ಅನುಷ್ಠಾನಗೊಂಡಾಗ ಮಲ್ಪೆಯಲ್ಲಿ 900 ಮಂದಿ ಹಾಗೂ ಹಂಗಾರಕಟ್ಟೆಯಲ್ಲಿ 400 ಕಂಪೆನಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಅಪರೋಕ್ಷವಾಗಿಯೂ ನೂರಾರು ಮಂದಿಗೆ ವಿವಿಧ ರೀತಿಯ ಉದ್ಯೋಗಗಳು ಸ್ಥಳೀಯವಾಗಿ ಲಭ್ಯವಾಗುತ್ತಿದೆ. ಈ ಮೂಲಕ ಇಲ್ಲಿನ ಆರ್ಥಿಕ ಬೆಳವಣಿಗೆಯಲ್ಲೂ ಕಂಪೆನಿ ಪಾತ್ರವಿರುತ್ತದೆ ಎಂದರು.
ಭವಿಷ್ಯದಲ್ಲಿ ಭಾರತೀಯ ಕಂಪೆನಿಗಳಿಗಾಗಿ ಟಗ್ ಹಾಗೂ ಕಾರ್ಗೋ ಶಿಪ್‌ಗಳನ್ನು ನಿರ್ಮಿಸಿಕೊಡುವ ಯೋಜನೆ ಇದೆ. ಈಗಾಗಲೇ ಕೆಲವು ಕಂಪೆನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಮಧು ನಾಯರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾರ್ವೆ ಎಂಬಸ್ಸಿಯ ಮಾರ್ಟಿನ್ ಅಲ್ಲದೇ, ಕ್ರಿಶ್ಚಿಯಾನ್ ಕಾರ್ಟರ್, ಕೊಚ್ಚಿನ್ ಶಿಪ್‌ಯಾರ್ಡ್‌ನ ತಾಂತ್ರಿಕ ನಿರ್ದೇಶಕ ಬಿಜೋಯ್ ಭಾಸ್ಕರ್, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಕುಮಾರ್ ಎ. ಉಪಸ್ಥಿತರಿದ್ದರು.