ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ
ಉಡುಪಿ, ಸೆ.1: ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಾದಕ ವಸ್ತು ವಿರೋಧಿ ಘಟಕ, ಮನಃಶಾಸ್ತ್ರ ವಿಭಾಗ ಮತ್ತು ರಾಜ್ಯ ಅಬಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತ ಕಾರ್ಯಕ್ರಮವನ್ನು ಕಾಲೇಜಿನ ಪಿ.ಜಿ. ಎವಿ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಅಬಕಾರಿ ಉಪನಿರೀಕ್ಷಕ ಜೋಸ್ಲಿನ್ ಫೆರ್ನಾಂಡಿಸ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಇಡೀ ಸಮಾಜದ ಅತ್ಯಮೂಲ್ಯವಾದ ಸಂಪತ್ತು. ನಿಮ್ಮಿಂದ ಸಮಾಜಕ್ಕೆ ನೀಡುವ ಕೊಡುಗೆಗಳು ಅಪಾರವಾಗಿವೆ. ಸಮಾಜಕ್ಕೆ ಒಳ್ಳೆಯ ನೆಲೆಗಟ್ಟನ್ನು ನೀಡಬೇಕು. ಆದರೆ ಇಂತಹ ಕೆಟ್ಟ ವಿಪರೀತ ಅಪಾಯಕಾರಿ ಪದಾರ್ಥ ಸೇವಿಸಿ ಅದರ ಗುಲಾಮರಾಗಬಾರದು ಎಂದರು.
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸಟನ್ಸಸ್ ಕಾಯಿದೆ 1985ರ ಪ್ರಕಾರ ಮಾದಕ ವಸ್ತುಗಳ ಸರಕುಗಳ ಉತ್ಪಾದನೆ, ತಯಾರಿಕೆ, ಸಾಗುವಳಿ, ಸಂಗ್ರಹಣೆ, ಸಾಗಾಣಿಕೆ ಮತ್ತು ಅವುಗಳ ಸೇವನೆ ಶಿಕ್ಷಾರ್ಹ ಮತ್ತು ಘೋರ ಅಪರಾಧವಾಗಿದೆ ಹಾಗೂ ಇದಕ್ಕೆ ಕಾನೂನಿನಲ್ಲಿ 10ರಿಂದ 20ವರ್ಷ ಗಳ ಕಾಲ ಜೈಲುಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷ ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮಾದಕ ವಸ್ತು ವ್ಯಸನ ವಿರೋಧಿ ಘಟಕದ ಸಂಚಾಲಕಿ ಶುಭಾಬಿ ಎಸ್., ಎನ್‌ಎಸ್‌ಎಸ್ ಘಟಕ-1 ಹಾಗೂ ಘಟಕ-2ರ ಸಂಚಾಲಕ ಡಾ.ರಾಜೇಂದ್ರ ಕೆ., ಮತ್ತು ರಮ್ಯಾ ವಿ. ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ. ವಹಿಸಿದ್ದರು. ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಕಾರ್ಯ ಕ್ರಮ ನಡೆಸಿಕೊಟ್ಟರು.