ಮೋದಿ ಸರಕಾರದ ಗ್ಯಾರಂಟಿ ಬಗ್ಗೆ ಜನತೆಗೆ ಮಾಹಿತಿ: ಶೋಭಾ ಕರಂದ್ಲಾಜೆ

Update: 2023-11-30 15:14 GMT

ಉಡುಪಿ, ನ.30: ದೇಶಾದ್ಯಂತ ನವೆಂಬರ್ 15ರಿಂದ ಮುಂದಿನ ಜನವರಿ 26ರವರೆಗೆ ನಡೆಯುತ್ತಿರುವ ‘ವಿಕಸಿತ ಭಾರತ ಸಂಕಲ್ಪಯಾತ್ರೆ’ಗೆ ಉಡುಪಿಯ ಅಂಬಲಪಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಇಂದು ಬೆಳಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಕಳೆದ 10 ವರ್ಷಗಳಲ್ಲಿ ಜಾರಿಗೆ ತಂದಿರುವ 70ಕ್ಕೂ ಅಧಿಕ ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಈ ಯಾತ್ರೆಯ ಉದ್ದೇಶ ಎಂದು ಯಾತ್ರೆಗೆ ಚಾಲನೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ನುಡಿದರು.

ನ.15ರಂದು ಭಾರತದಾದ್ಯಂತ ಪ್ರಾರಂಭಗೊಂಡ ಯೋಜನೆಯಲ್ಲಿ 3000ಕ್ಕೂ ಅಧಿಕ ಎಲ್‌ಇಡಿ ಸಹಿತದ ವ್ಯಾನ್‌ಗಳಿಗೆ ಪ್ರಧಾನಿಯವರೇ ಚಾಲನೆ ನೀಡಿದ್ದಾರೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಅಥವಾ ಎರಡು ವ್ಯಾನ್‌ಗಳು ಪ್ರತಿ ಗ್ರಾಪಂಗಳಿಗೂ ತೆರಳಿ 15 ವರ್ಷಗಳ ಮೋದಿ ಸರಕಾರದ ಸಾಧನೆಯನ್ನು ಸ್ಥಳೀಯ ಭಾಷೆಗಳಲ್ಲೇ ತಿಳಿಸಲಿದೆ. ಅಲ್ಲದೇ ಮೋದಿಯವರ ಸಂದೇಶವನ್ನೂ ಅವು ಪ್ರಸಾರ ಮಾಡಲಿವೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ 70ಕ್ಕೂ ಹೆಚ್ಚು ಯೋಜನೆಗಳಲ್ಲಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸಲಾಗುವುದು. ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ. ಈ ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್‌ಇಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು ಎಂದು ವಿವರಿಸಿದರು.

ಇದರ ಮೂಲಕ ಆಯುಷ್ಮಾನ್ ಭಾರತ್, ಪಿಎಂ ಉಜ್ವಲ ಯೋಜನೆ, ಪಿಎಂ ಕಿಸಾನ್ ಸಮ್ಮಾನ್, ಜನಧನ್ ಯೋಜನಾ, ಸುರಕ್ಷಾ ಬಿಮಾ ಯೋಜನೆಗಳು ಸೇರಿದಂತೆ 17 ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಬ್ಯಾಂಕ್ ಅಧಿಕಾರಿ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡುವುದಲ್ಲದೇ ಸ್ಥಳದಲ್ಲೇ ಆಯ್ದ ಫಲಾನುಭವಿ ಗಳಿಗೆ ಆದೇಶ ಪತ್ರಗಳನ್ನು ನೀಡಲಾಗುವುದು ಎಂದರು.

2047ರ ವೇಳೆಗೆ ಭಾರತವನ್ನು ವಿಶ್ವದ ನಂ.1 ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಆದುದರಿಂದ ಮೋದಿ ಅವರು ಬೇರೆ ಬೇರೆ ಯೋಜನೆಗಳನ್ನು ಬೇರೆ ಬೇರೆ ಉದ್ದೇಶಗಳೊಂದಿಗೆ ಜಾರಿಗೊಳಿಸುತಿದ್ದು, ಇವುಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವ ಉದ್ದೇಶವನ್ನು ಮೋದಿ ಹೊಂದಿದ್ದಾರೆ ಎಂದು ಶೋಭಾ ನುಡಿದರು.

ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕೆನರಾ ಬ್ಯಾಂಕ್ ಉಡುಪಿ ವೃತ್ತದ ಮಹಾ ಪ್ರಬಂಧಕ ಕಂಠಿ, ಅಂಬಲಪಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷೆ ಸುಜಾತಾ ಎಸ್. ಉಪಸ್ಥಿತರಿದ್ದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಅವರು ಅತಿಥಿ ಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆಸಿದ ಸಂವಾ ದದ ನೇರ ಪ್ರಸಾರ ಮಾಡಲಾಯಿತು. ದೇಶದ ಮಹಿಳೆಯರು ಹಾಗೂ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಹಾರಿಸಲು ವಿಶೇಷ ತರಬೇತಿ ನೀಡುವ ಹಾಗೂ ಮುಂದಿನ ಮೂರು ವರ್ಷಗಳಲ್ಲಿ 15 ಸಾವಿರ ಡ್ರೋನ್‌ಗಳನ್ನು ವಿತರಿಸುವ ಯೋಜನೆಯನ್ನು ನೇರ ಪ್ರಸಾರದ ವೇಳೆ ಪ್ರಧಾನಿ ಘೋಷಿಸಿದರು.








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News