ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಉಡುಪಿ ಜಿಲ್ಲಾದಿಕಾರಿ ವಿದ್ಯಾಕುಮಾರಿ

Update: 2023-10-02 13:01 GMT

ಉಡುಪಿ: ಯುವಜನತೆ ದುಶ್ಚಟಗಳಿಗೆ ಬಲಿಯಾಗುವಲ್ಲಿ ಸಾಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿರಬಹುದು. ಆದರೆ ಅದನ್ನು ಮೆಟ್ಟಿ ನಿಂತು ಅದರಿಂದ ಹೊರಬರುವುದು ಮುಖ್ಯವಾಗಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಉಡುಪಿ ಜಿಲ್ಲಾದಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್‌ಗಳ ಅಂಗಸಂಸ್ಥೆ ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಹಾಗೂ ತಾಲೂಕು ಜನಜಾಗೃತಿ ವೇದಿಕೆ ಉಡುಪಿ, ಕಾಪು, ಬ್ರಹ್ಮಾವರ ಮತ್ತು ಪರ್ಯಾಯ ಶ್ರೀಕೃಷ್ಣಾಪುರ ಮಠಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ನಡೆದ ಜನಜಾಗೃತಿ ಜಾಥಾ ಮತ್ತು ಸಮಾವೇಶ ದಲ್ಲಿ ಈಶ್ರಮ್ ಕಾರ್ಡ್ ಹಾಗೂ ಪಿಎಂಜಿ ದಿಶಾ ಪ್ರಮಾಣ ಪತ್ರವನ್ನು ವಿತರಿಸಿ ಅವರು ಮಾತನಾಡುತಿದ್ದರು.

ಇಂದು ಹೆಚ್ಚು ಹೆಚ್ಚು ಯುವಜನರು ದುಶ್ಚಟಗಳಿಗೆ ದಾಸರಾಗುತ್ತಿರುವು ದನ್ನು ನೋಡುತಿದ್ದೇವೆ. ಇಂಥ ಸಮಯದಲ್ಲಿ ಅವರಿಗೆ ಸೂಕ್ತ ಸಲಹೆ ಹಾಗೂ ಕೌನ್ಸಿಲಿಂಗ್‌ನ ಅಗತ್ಯವಿದೆ. ಆದರೆ ನಾವಿಂದು ಅದನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತಿ ದ್ದೇವೆ. ಇದು ತಪ್ಪು. ಕೌನ್ಸಿಲಿಂಗ್‌ನಿಂದ ಮಾತ್ರ ಅವರನ್ನು ದುಶ್ಚಟಗಳಿಂದ ಹೊರತರಲು ಸಾಧ್ಯವಿದೆ. ಇದು ಸಮಾಜದ ಜವಾಬ್ದಾರಿ ಸಹ ಆಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವ್ಯಸನ ಮುಕ್ತರಾದ ನವಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವ್ಯಸನಮುಕ್ತ ವ್ಯಕ್ತಿಗಳಿಗೆ ಸಮಾಜ ಪ್ರೀತಿ, ವಿಶ್ವಾಸವನ್ನು ತೋರಿಸಬೇಕು.ಅವರು ಮತ್ತೆ ಮುಖ್ಯ ವಾಹಿನಿಗೆ ಬರುವಂತೆ ನೋಡಿಕೊಳ್ಳಬೇಕು. ಅವರಿಗೆ ಹೊಸ ಬದುಕು ಕಲ್ಪಿಸಬೇಕು ಎಂದರು.

ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತ್ಯಾನಂದ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಅಖಿಲ ಕರ್ನಾಟಕ ಜನಜಾಗನತಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ದೇವದಾಸ ಹೆಬ್ಬಾರ್, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಸೂಕ್ಷ್ಮ ವಿಮಾ ವಿಭಾಗದ ಪ್ರಬಂಧಕ ದಿನೇಶ್ ಪ್ರಭು, ಬ್ರಹ್ಮಾವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ನಗರಸಭಾ ಸದಸ್ಯೆ ಮಾನಸಿ ಸಿ.ಪೈ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷೆ ಶಮಿತಿ ಪಿ. ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಅಮೀನ್ ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೆ ಮುನ್ನ ಜನಜಾಗೃತಿ ವೇದಿಕೆಯ ಮತ್ತು ನವಜೀವನ ಸಮಿತಿಯ ಸದಸ್ಯರಿಂದ ಜನಜಾಗೃತಿ ಜಾಥಾ ನಗರದ ಬೋರ್ಡ್ ಹೈಸ್ಕೂಲ್ ಆವರಣ ದಿಂದ ರಾಜಾಂಗಣದವರೆಗೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News