ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣ| 3ನೇ ಆರೋಪಿ ಬಿಜೆಪಿ ಕಾರ್ಯಕರ್ತ; ಫೋಟೊ ಬಿಡುಗಡೆ ಮಾಡಿದ ಯುವ ಕಾಂಗ್ರೆಸ್ ನಾಯಕರು

Update: 2024-08-28 13:59 GMT

ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಇತ್ತೀಚೆಗೆ ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಮೂರನೇ ಆರೋಪಿ ಅಭಯ್, ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಬಹಿರಂಗ ಪಡಿಸಿರುವ ಜಿಲ್ಲಾ ಯುವ ಕಾಂಗ್ರೆಸ್, ಈ ಸಂಬಂಧ ಆತನ ವಿವಿಧ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ಜಿಲ್ಲಾ ಯುವ ಕಾಂಗ್ರೆಸ್ ನಾಯಕರು, ಅಭಯ್ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸೇರಿದಂತೆ ವಿವಿಧ ನಾಯಕರೊಂದಿಗಿರುವ ಅವರ ಪೋಟೊಗಳನ್ನು ಪ್ರದರ್ಶಿಸಿದರಲ್ಲದೇ, ಈ ವಿಷಯದಲ್ಲಿ ಬಿಜೆಪಿ ನಾಯಕರು ತೋರುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಹಾಗೂ ಕಾರ್ಕಳ ಬ್ಲಾಕ್ ಅಧ್ಯಕ್ಷ ಯೋಗೀಶ್ ಆಚಾರ್ಯ, ಪ್ರಕರಣ ಬೆಳಕಿಗೆ ಬಂದ ಮೊದಲ ದಿನವೇ ಪೊಲೀಸರು ಪ್ರಮುಖ ಆರೋಪಿ ಅಲ್ತಾಫ್ ಎಂಬಾತನನ್ನು ಬಂಧಿಸಿದಾಗ ಬಿಜೆಪಿಯ ಪಟಾಲಂ ದೊಡ್ಡಮಟ್ಟದಲ್ಲಿ ಅಬ್ಬರಿಸಿತು. ಆಗ ಅವರ ಕಣ್ಣಿಗೆ ಸಂತ್ರಸ್ತ ಯುವತಿ ಹಿಂದುವಾಗಿ ಕಂಡಿದ್ದು, ಇಡೀ ಪ್ರಕರಣವನ್ನು ‘ಜಿಹಾದಿ’ ಕೃತ್ಯವಾಗಿ ಬಿಂಬಿಸಲಾಯಿತು. ಇದರೊಂದಿಗೆ ಸರಣಿ ಪ್ರತಿಭಟನೆ, ಖಂಡನಾ ಹೇಳಿಕೆಗಳ ಮಹಾಪೂರವೇ ಹರಿದುಬಂತು. ಈ ಬಗ್ಗೆ ಎನ್‌ಐಎ ತನಿಖೆ ನಡೆಯಬೇಕೆಂಬ ಆಗ್ರಹವೂ ಕೇಳಿ ಬಂದವು ಎಂದರು.

ಮರುದಿನ ಕಾರ್ಕಳದಲ್ಲಿ ಸಂಘಪರಿವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಸಮುದಾಯವನ್ನು ಕೆಟ್ಟದ್ದಾಗಿ ನಿಂದಿಸಲಾಯಿತಲ್ಲದೇ, ಶಾಸಕ ಸುನಿಲ್‌ ಕುಮಾರ್ ಅವರೇ ಇದರ ನೇತೃತ್ವವನ್ನು ವಹಿಸಿದ್ದರು. ಸೈಬರ್ ಪರಶುರಾಮ ಮೂರ್ತಿಯಲ್ಲಿ ಹೋದ ಮಾನವನ್ನು ಇದರಲ್ಲಿ ಮರಳಿ ಪಡೆಯಲು ಹತಾಶ ಪ್ರಯತ್ನ ನಡೆಸಿದ ಶಾಸಕರು, ಪರೋಕ್ಷವಾಗಿ ಹಿಂದು ಯುವಕರಿಗೆ ಅತ್ಯಾಚಾರ ಮಾಡುವಂತೆ ಕರೆ ನೀಡಿದ್ದರು ಎಂದು ತಿಳಿಸಿದರು.

ಶಾಸಕರ ಇಂಥ ಮನೋಸ್ಥಿತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮನುಷ್ಯನೆನಿಸಿಕೊಂಡ ನಾಗರಿಕ ಸಮಾಜದ ಎಲ್ಲರೂ ಇದನ್ನು ಖಂಡಿಸಲೇ ಬೇಕು ಎಂದು ಹೇಳಿದ ಅವರು, ಅಂದು ಮಾತನಾಡಿದ ಮತ್ತೊಬ್ಬ ಮುಖಂಡ ಸಹ ಅತ್ಯಂತ ಪ್ರಚೋದನಕಾರಿಯಾಗಿ ಮಾತನಾಡಿದ್ದ ಎಂದರು.

ಆದರೆ ಅದೇ ದಿನ ಸಂಜೆ ಪೊಲೀಸರು ಬಂಧಿಸಿದ ಪ್ರಕರಣದ ಮೂರನೇ ಆರೋಪಿ ಅಭಯ್, ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂಬುದು ಗೊತ್ತಾದ ಬಳಿಕ ಕಳೆದೆರಡು ದಿನಗಳಿಂದ ಬಿಜೆಪಿ ಮೌನಕ್ಕೆ ಶರಣಾಗಿದೆ ಎಂದು ಅವರು ಹೇಳಿದ ಯೋಗೀಶ್ ಆಚಾರ್ಯ, ಕೆಲವು ದಿನಗಳ ಹಿಂದೆ ಕಲ್ಯದ ಬಿಜೆಪಿ ಗ್ರಾಪಂ ಸದಸ್ಯನೊಬ್ಬನನ್ನು ಫೋಕ್ಸೊ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಇದುವರೆಗೆ ಈ ಬಗ್ಗೆ ಬಿಜೆಪಿ ಯಾವುದೇ ಪ್ರತಿಭಟನೆ ನಡೆಸಿಲ್ಲ, ಖಂಡನಾ ಹೇಳಿಕೆ ನೀಡಿಲ್ಲ ಎಂದರಲ್ಲದೇ, ಬಿಜೆಪಿ ನಾಯಕರು ಇಂಥ ಲಜ್ಜೆಗೇಡಿ ರಾಜಕೀಯವನ್ನು ಬಿಡಬೇಕು ಎಂದರು.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಪೂರೈಸಿದ್ದ ಮೂರನೇ ಆರೋಪಿ ಅಭಯ್, ಮಾಜಿ ಸಚಿವ ಸುನಿಲ್‌ಕುಮಾರ ಅವರ ಆಪ್ತನಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ಫೇಸ್ಬುಕ್ ಪ್ರೊಫೈಲ್‌ನಲ್ಲೂ ಸುನಿಲ್ ಕುಮಾರ್ ಅವರ ಫೋಟೋವನ್ನು  ಕವರ್ ಪೋಟೊ ಆಗಿ ಬಳಸಿದ್ದಾನೆ. ಈತ ಕಾರ್ಕಳ ಬಿಜೆಪಿಯಲ್ಲಿ ಸಕ್ರಿಯ ಸದಸ್ಯನಾಗಿದ್ದು ಅವರ ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿರುತಿದ್ದ ಎಂದು ಯೋಗೀಶ್ ಆಚಾರ್ಯ ತಿಳಿಸಿದರು.

ಇದೀಗ ಮೂರನೇ ಆರೋಪಿ ಅಭಯ್ ಬಂಧವಾಗಿರುವುದು ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ಇಡೀ ಹೋರಾಟ ವನ್ನು ಕೈಬಿಟ್ಟಿದ್ದಾರೆ. ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ನಾವೆಲ್ಲರೂ ಖಂಡಿಸುತ್ತೇವೆ. ಆದರೆ ಅತ್ಯಾಚಾರದಂತಹ ಪ್ರಕರಣದಲ್ಲಿ ಯಾವುದೇ ಧರ್ಮ, ಪಕ್ಷದವರಿದ್ದರೂ ಅದನ್ನು ಖಂಡಿಸುವ ಬದಲು ಬಿಜೆಪಿಯವರು ಧರ್ಮಾಧಾರಿತವಾಗಿ ನೋಡುತ್ತಿದ್ದಾರೆ. ಇದು ಖಂಡನೀಯ. ಜನರು ಬಿಜೆಪಿಯ ದ್ವಂದ್ವ ನಿಲುವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ದೀಪಕ್ ಕೋಟ್ಯಾನ್ ಹೇಳಿದರು.

ಬಿಜೆಪಿ ಇನ್ನಾದರೂ ಇಂಥ ಲಜ್ಜೆಗೇಡಿ ರಾಜಕೀಯವನ್ನು ಬಿಡಬೇಕು. ಚುನಾವಣಾ ಲಾಭಕ್ಕಾಗಿ ಅಗ್ಗದ, ಅಮಾಯಕರ ಬಲಿಪಡೆಯುವ ದಾರಿಯ ಬದಲಿಗೆ ಅಭಿವೃದ್ಧಿಯ ದಾರಿ ಅನುಸರಿಸಲಿ. ಶಾಸಕರು ಜಾತಿ, ಧರ್ಮವನ್ನು ಮೀರಿದ ರಾಜಕೀಯದ ಖುಷಿಯನ್ನು ನೀಡಲಿ ಎಂದು ಹಾರೈಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್‌ನ ಮುಖಂಡರಾದ ಎನ್‌ಎಸ್‌ಯುಐ ಅಧ್ಯಕ್ಷ ಸೌರಭ್ ಬಲ್ಲಾಳ್, ಸಜ್ಜನ್ ಶೆಟ್ಟಿ, ಅರ್ಜುನ ನಾಯರಿ ಉಪಸ್ಥಿತರಿದ್ದರು.









 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News