ಕುಷ್ಠರೋಗ ನಿರ್ವಹಣೆ ಮಾಹಿತಿ ಕಾರ್ಯಾಗಾರ
ಮಣಿಪಾಲ, ಆ.25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯ ಕ್ರಮ ಉಡುಪಿ ಜಿಲ್ಲೆ, ಹಾಗೂ ಕೆಎಂಸಿ ಮಣಿಪಾಲದ ಚರ್ಮ ರೋಗ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗ ಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಸರಕಾರಿ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಹಾಗೂ ಆಯುಷ್ಮಾನ್ ವೈದ್ಯಾಧಿಕಾರಿಗಳಿಗೆ ಆರೋಗ್ಯ ಕೇಂದ್ರಗಳಲ್ಲಿ ಕುಷ್ಠರೋಗ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರವು ಗುರುವಾರ ಮಣಿಪಾಲದ ಕೆಎಂಸಿಯಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಉಡುಪಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಲತಾ, ಕಾರ್ಯಾಗಾರದ ವೀಕ್ಷಕರಾದ ಡಾ.ಮಹೇಶ್ ಐತಾಳ್, ಕೆಎಂಸಿ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ರಾವ್, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ಚರ್ಮರೋಗ ತಪಾಸಣಾ ಶಿಬಿರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ವೈದ್ಯಾಧಿಕಾರಿಗಳಾದ ಕೋಡಿಬೇಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಉಮೇಶ್ ನಾಯಕ್, ಇರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಯಶೋಧರ್ ಎಂ. ಅವರನ್ನು ಸನ್ಮಾನಿಸಲಾಯಿತು.
ಒಂದು ದಿನದ ಕಾರ್ಯಗಾರದಲ್ಲಿ ಕೆಎಂಸಿಯ ವಿವಿಧ ವಿಭಾಗಗಳ ತಜ್ಞ ವೈದ್ಯರು, ನರರೋಗ, ಚರ್ಮರೋಗ, ಸೂಕ್ಷ್ಣಾಣು ರೋಗ, ಒಕ್ಯುಪೇಶನಲ್ ಥೆರಪಿ, ಸಮುದಾಯ ವಿಭಾಗದ ತಜ್ಞರು ಉಪನ್ಯಾಸ ನೀಡಿದರು. ಒಟ್ಟು 120 ಮಂದಿ ವೈದ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಡಾ.ಅಶ್ವಿನಿಕುಮಾರ್ ಸ್ವಾಗತಿಸಿ, ಡಾ.ಚೈತ್ರಾ ಆರ್.ರಾವ್ ವಂದಿಸಿದರು. ಡಾ.ರಕ್ಷಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.