ಮಣಿಪಾಲ: ಗರ್ಭಿಣಿಗೆ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ
ಉಡುಪಿ, ಆ.11: ತಾಯಿಮಾಸು ಅಥವಾ ಮಗುವಿನ ಕಸ (ಪ್ಲಾಸೆಂಟಾ) ಗರ್ಭಿಣಿಯ ಗರ್ಭಕೋಶದ ಬಾಯಿಗೆ ಅಡ್ಡವಾ ಗಿದ್ದು, ಹೆರಿಗೆಯ ಬಳಿಕ ಸಹಜವಾಗಿ ಬೇರ್ಪಡದ ಸ್ಥಿತಿ ಇದ್ದ ಅಪರೂಪದ ಪ್ರಕರಣವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಎರಡನೆ ಬಾರಿ ಗರ್ಭ ಧರಿಸಿದ್ದ, 31 ವರ್ಷ ವಯಸ್ಸಿನ ಮಹಿಳೆ 34ನೇ ವಾರದ ಗರ್ಭಾವಸ್ಥೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಗುವಿನ ಕಸ (ಪ್ಲಾಸೆಂಟಾ) ಗರ್ಭಕೋಶದ ಬಾಯಿಗೆ ಅಡ್ಡಲಾಗಿರುವ ವಿಶೇಷ ಸ್ಥಿತಿ ಬೆಳಕಿಗೆ ಬಂದಿತ್ತು. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಪ್ಲಾಸೆಂಟಾ ಪ್ರೀವಿಯಾ ಮತ್ತು ಪ್ಲಾಸೆಂಟಾ ಅಕ್ರಿಟಾ ಇರುವ ಸಾಧ್ಯತೆ ಕಂಡು ಬಂದಿತು. ಎಂಐಆರ್ ಇದನ್ನು ದೃಢಪಡಿಸಿತು.
ಕೆಎಂಸಿಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಪಾದ ಹೆಬ್ಬಾರ್ ನೇತೃತ್ವದ ತಂಡ ವಿಶೇಷ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಆಸ್ಪತ್ರೆಯ ರೇಡಿಯಾಲಜಿ ತಜ್ಞರು, ಶಿಶುರೋಗ ತಜ್ಞರು, ಅರಿವಳಿಕೆ ತಜ್ಞರು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
ಶಸ್ತ್ರ ಚಿಕಿತ್ಸೆಯ ಆರಂಭದಲ್ಲಿ, ಗರ್ಭಕೋಶದ ಪ್ರದೇಶಕ್ಕೆ ರಕ್ತ ಸರಬರಾಜು ಮಾಡುವ ಎರಡೂ ಕಡೆಯ ಅಂತರಿಕ ಇಲಿಯಾಕ್ ರಕ್ತನಾಳಗಳಲ್ಲಿ ಕ್ಯಾಥೆಟರ್ ಬಳಸಿ ರಕ್ತ ಚಲನೆಯ ನಿಯಂತ್ರಿಸಲಾಯಿತು. ಇದನ್ನು ಇಂಟೆರ್ವೆನ್ಷನಲ್ ರೇಡಿಯಾಲಜಿ ವಿಭಾಗದ ಡಾ. ಮಿಥುನ್ ಶೇಖರ್ ಮತ್ತು ಡಾ ಹರ್ಷಿತ್ ಕ್ರಮಧಾರಿ ನಿರ್ವಹಿಸಿದರು.
ಬಳಿಕ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ (ಸಿಝೇರಿಯನ್) ನಡೆಸಿ ಮಗುವನ್ನು ಹೊರತೆಗೆಯಲಾಯಿತು. ಮಗು ಹೊರತೆಗೆದ ಬಳಿಕ ರಕ್ತನಾಳಗಳಿಗೆ ತೊಡಿಸಲಾಗಿದ್ದ ಬಲೂನುಗಳನ್ನು ಹಿಗ್ಗಿಸಿ, ರಕ್ತಸ್ರಾವ ಸಂಭವಿಸದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಯಿತು. ಗರ್ಭಕೋಶಕ್ಕೆ ಅಂಟಿಕೊಂಡಿದ್ದ ಪ್ಲಾಸೆಂಟಾವನ್ನು ಬೆರಳುಗಳಿಂದ ಜಾಗರೂಕವಾಗಿ ಬಿಡಿಸಿ ತೆಗೆಯ ಲಾಯಿತು. ಬಳಿಕ ಮೇಲಿನ ಎರಡೂ ರಕ್ತನಾಳಗಳಲ್ಲಿ ಜೆಲ್ ಫೋಮ್‌ನಿಂದ ಎಂಬೋಲೈಸೇಶನ್ ಮಾಡಲಾಯಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವ ಸಾಮಾನ್ಯವಾಗಿದ್ದು, ರಕ್ತದ ನಷ್ಟವನ್ನು ಸರಿದೂಗಿಸಲು ಕೇವಲ 2 ಪಿಂಟ್ ರಕ್ತ ವನ್ನು ನೀಡಲಾಗಿತು.
ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ಸ್ಥಿತಿ ಸ್ಥಿರವಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಲಾ ಯಿತು. ತಾಯಿ ಮತ್ತು ಮಗು ಆರಾಮವಾಗಿ ಹೆರಿಗೆಯ ಅವಧಿಯನ್ನು ಪೂರೈಸಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಾ. ಶ್ರೀಪಾದ ಹೆಬ್ಬಾರ್ ತಿಳಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಪರೇಶನ್ ಥಿಯೇಟರ್(ಕ್ಯಾಥ್‌ಲ್ಯಾಬ್) ನಲ್ಲಿ ಈ ವಿಶೇಷ ಪ್ರಕ್ರಿಯೆ ನಡೆಸಲಾಯಿತು. ಈ ಶಸ್ತ್ರಚಿಕಿತ್ಸೆಗೆ ಸರಾಸರಿ ಒಂದೂವರೆ ಗಂಟೆ ಸಮಯ ತಗುಲಿತು. ಈ ಪ್ರಕರಣದಲ್ಲಿ ನಾವು ತಾಯಿಯನ್ನು ತೀವ್ರ ಅಪಾಯ ದಿಂದ ರಕ್ಷಿಸಿದ್ದಲ್ಲದೇ, ಅವರ ಗರ್ಭಕೋಶ ವನ್ನು ಕೂಡ ಉಳಿಸಿದೆವು ಎಂದು ರೇಡಿಯಾಲಜಿ ಕನ್ಸಲ್ಟಂಟ್ ಆಗಿರುವ ಡಾ. ಮಿಥುನ್ ಶೇಖರ್ ತಿಳಿಸಿದರು.
ಪ್ಲಾಸೆಂಟಾವು ಗರ್ಭಾಶಯದ ಗೋಡೆಯೊಳಗೆ ಆಳದಲ್ಲಿ ಹೂತು ಹೋಗಿರುತ್ತದೆ. ಪ್ರಸವದ ಬಳಿಕ ಇದು ಗರ್ಭಕೋಶದಿಂದ ಬೇರ್ಪಡು ವುದಿಲ್ಲ. ಇದರಿಂದ ಅಪಾಯಕಾರಿ ಮಟ್ಟದಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದು ಶೇ.7ರಷ್ಟು ಮರಣ ದರವನ್ನು ಹೊಂದಿರುವ ಗಂಭೀರ ಸ್ಥಿತಿಯಾಗಿದ್ದು, ಸಿಸೇರಿಯನ್ ಹೆರಿಗೆಯ ಸಮಯದಲ್ಲಿ ಸಂಭವಿಸುವ ಅತೀವ ರಕ್ತಸ್ರಾವದಿಂದ ಸಾವು ಸಂಭವಿಸುತ್ತದೆ. ಇದರಿಂದ ದೇಹದ ವಿವಿಧ ಅಂಗಗಳಿಗೆ ಹಾನಿಯಾಗಿ ಬಹುಅಂಗಗಳ ಕಾರ್ಯವೈಫಲ್ಯದಿಂದ ಸಾವು ಕೂಡ ಸಂಭವಿಸಬಹುದಾಗಿದೆ.
ಆದರೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ವಿಶೇಷ ತಂತ್ರಕೌಶಲ್ಯದೊಂದಿಗೆರಾಜ್ಯದಲ್ಲಿ ಮೊದಲ ಬಾರಿಗೆ ನಡೆಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ನುಡಿದರು. ಇದಕ್ಕಾಗಿ ಅವರು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.