ಮಣಿಪಾಲ: ಪಂಡಿತ್ ಮಿಲಿಂದ್ ಚಿತ್ತಾಲರ ಸಂಗೀತ ಕಚೇರಿ

Update: 2023-07-26 14:13 GMT

ಮಣಿಪಾಲ, ಜು.26: ಶಾಸ್ತ್ರೀಯ ಸಂಗೀತದಲ್ಲಿ ಮನಸ್ಸನ್ನು ಶಮನ ಗೊಳಿಸುವ ಅಂಶಗಳಿವೆ. ಇಂದಿನ ಯುವ ಜನಾಂಗ ಈ ಸಂಗೀತದ ಸೂಕ್ಷ್ಮಗಳನ್ನು ತಾಳ್ಮೆಯಿಂದ ಅರಿಯುವ ಯತ್ನ ಮಾಡಬೇಕು ಎಂದು ಕನ್ನಡದ ಅಗ್ರಶ್ರೇಣಿಯ ಸಾಹಿತಿ ಯಶವಂತ ಚಿತ್ತಾಲರ ಪುತ್ರ ಹಾಗೂ ಖ್ಯಾತ ಹಿಂದುಸ್ತಾನಿ ಸಂಗೀತಗಾರ ಪಂಡಿತ್ ಮಿಲಿಂದ್ ಚಿತ್ತಾಲ್ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ (ಜೆಸಿಪಿಎಎಸ್), ಎಂಐಸಿ, ಎಂಐಟಿಯ ಆಶ್ರಯದಲ್ಲಿ ನಡೆದ ಹಿಂದೂಸ್ತಾನಿ ಗಾಯನದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಆಧುನಿಕ ಸಮಾಜದಲ್ಲಿ ಸೇರಿಕೊಂಡಿರುವ ‘ತೀವ್ರತರವಾದ ವೇಗ’ ಬದುಕಿನ ನೆಮ್ಮದಿಯನ್ನು ಕದಲುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಸಂಗೀತವನ್ನೊಳಗೊಂಡಂತೆ ಎಲ್ಲಾ ಕಲೆಗಳು ಜೀವನದಲ್ಲಿ ಟಾನಿಕ್‌ನಂತೆ ಶಮನಗೊಳಿಸುವ ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಅವರು ನುಡಿದರು.

ಇದಕ್ಕೆ ಮೊದಲು ಮುಂಬಯಿಯಲ್ಲೇ ಹುಟ್ಟಿ, ಬೆಳೆದ ಪಂಡಿತ್ ಮಿಲಿಂದ್ ಚಿತ್ತಾಲ್ ಇವರು ತಮ್ಮ ಸಂಗೀತದಲ್ಲಿ ರಾಗ್ ಶ್ರೀ , ರಾಗ್ ಜೈ ಜೈವಂತಿ, ಸೂರದಾಸ್ ಭಜನ್, ‘ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ’, ಮರಾಠಿ ಅಭಂಗ್ ಇತ್ಯಾದಿಗಳನ್ನು ಪ್ರಸ್ತುತ ಪಡಿಸಿದರು.

ಚಿತ್ತಾಲರ ಜೊತೆ ವಯಲಿನ್‌ನಲ್ಲಿ ಮಣಿಪಾಲದ ರಂಗ ಪೈ, ತಬಲದಲ್ಲಿ ಭಾರವಿ ಧೇರಾಜೆ, ಹಾರ್ಮೋನಿಯಂನಲ್ಲಿ ಶಶಿಕಿರಣ್, ತಾನ್‌ಪುರದಲ್ಲಿ ಪ್ರವೀಣ್ ಕರಾಡಗಿ ಸಾಥ್ ನೀಡಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಕೋರ್ಸ್‌ಗಳು ಸಂಗೀತ ಸೇರಿದಂತೆ ವಿವಿಧ ಪ್ರಕಾರದ ಕಲೆಗಳಿಗೆ ಹೇಗೆ ಸಂವೇದನಾಶೀಲವಾಗಿರಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ ಎಂದರು.

ಮಾಹೆ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಶೋಭಾ ಯು ಕಾಮತ್ ಸಂಗೀತ ಕಲಾವಿದರನ್ನು ಸನ್ಮಾನಿಸಿದರು. ಅನೇಕ ಸಂಗೀತ ರಸಿಕರು ಕಾರ್ಯಕ್ರಮದಲ್ಲಿ ಇದ್ದು ಚರ್ಚೆಯಲ್ಲಿ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News