ಮಣಿಪಾಲ: ಕೆಎಂಸಿಯಲ್ಲಿ ಅತ್ಯಾಧುನಿಕ 3ಟೆಸ್ಲಾ ಎಂಐಆರ್ ಉದ್ಘಾಟನೆ
ಉಡುಪಿ, ಆ.17: ಅತ್ಯಾಧುನಿಕ ತಂತ್ರಜ್ಞಾನದ ಕೃತಕ ಬುದ್ಧಿಮತ್ತೆ (ಎಐ) ಯನ್ನು ಸಕ್ರಿಯಗೊಳಿಸಿದ 3ಟೆಸ್ಲಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‌ಐ) ಯಂತ್ರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಂಗಳವಾರ ಉದ್ಘಾಟನೆಗೊಂಡಿತು.
ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥರಾದ ಡಾ. ರಂಜನ್ ಆರ್ ಪೈ ಅವರು ಸುಧಾರಿತ ಅತ್ಯಾಧುನಿಕ 3 ಟೆಸ್ಲಾ ಎಂಆರ್‌ಐ ಯಂತ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸೆಸ್‌ನ ಮುಖ್ಯಸ್ಥರಾದ ಡಾ.ಸುದರ್ಶನ್ ಬಲ್ಲಾಳ್, ಮಣಿಪಾಲ ಮಾಹೆ ಕುಲಪತಿ ಲೆ. ಜನರಲ್ (ಡಾ)ಎಂ.ಡಿ.ವೆಂಕಟೇಶ್ ಮತ್ತು ಮುಂಬಯಿ ಮೆಡಿಕಾ ಬಜಾರ್‌ನ ಹಿರಿಯ ಉಪಾಧ್ಯಕ್ಷ ಹಾಗೂ ವ್ಯವಹಾರ ಮುಖ್ಯಸ್ಥ ವಿ ಪಿ ತಿರುಮಲೈ ಉಪಸ್ಥಿತ ರಿದ್ದರು.
ಬಳಿಕ ಮಧುವನ್ ಸೆರಾಯ್ ಹೊಟೇಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸುದರ್ಶನ್ ಬಲ್ಲಾಳ್, ಇಲ್ಲಿ ಉದ್ಘಾಟನೆಗೊಂಡ 3ಟೆಸ್ಲಾ ಎಂಆರ್‌ಐ ಯಂತ್ರ, ಶೈಕ್ಷಣಿಕ ಉದ್ದೇಶ ಗಳಿಗಾಗಿ ಮಾತ್ರವಲ್ಲದೆ ಅನೇಕ ಜಿಲ್ಲೆಗಳ ಗ್ರಾಮೀಣ ರೋಗಿಗಳಿಗೆ ಉತ್ತಮ ಪ್ರಯೋಜನವನ್ನು ನೀಡಲಿದೆ. ಇನ್ನು ರೋಗಿಗಳು ಸುಧಾರಿತ ರೋಗ ನಿರ್ಣಯ ಮತ್ತು ಚಿಕಿತ್ಸೆ ಪಡೆಯಲು ದೊಡ್ಡ ನಗರಗಳಿಗೆ ಹೋಗಬೇಕಾಗಿಲ್ಲ ಎಂದರು.
ಮಾಹೆ ಕುಲಪತಿ ಲೆ.ಜ. (ಡಾ) ಎಂ.ಡಿ.ವೆಂಕಟೇಶ್ ಮಾತನಾಡಿ, 3 ಟೆಸ್ಲಾ ಎಂಆರ್‌ಐ ಯಂತ್ರದಲ್ಲಿ ಅತ್ಯಾಧುನಿಕ ತಂತ್ರ ಜ್ಞಾನವನ್ನು ಅಳವಡಿಸ ಲಾಗಿದೆ. ಈ ಉಪಕರಣವು ಸಿದ್ಧಾಂತ ಮತ್ತು ಅಭ್ಯಾಸವನ್ನು ಸೇತುವೆ ಮಾಡುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಇದರಿಂದ ಪ್ರಯೋಜನವಿದೆ ಎಂದರು.
ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಮಣಿಪಾಲ ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮತ್ತು ವಿಕಿರಣ ರೋಗ ನಿರ್ಣಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ ಪ್ರಕಾಶಿನಿ ಕೆ., ಮಾಹೆ ಸಿಓಓ ಸಿ.ಜಿ.ಮುತ್ತಣ್ಣ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಓಓ ಡಾ.ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕ ಡಾ. ರಾಜಗೋಪಾಲ್ ಕೆ.ವಿ ಸ್ವಾಗತಿಸಿ ಸಹ ಪ್ರಾಧ್ಯಾಪಕಿ ಪ್ರಿಯಾ ಜಯರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ವಿಭಾಗ ಮುಖ್ಯಸ್ಥರಾದ ಡಾ.ಪ್ರಕಾಶಿನಿ ಕೆ ನೂತನ ಎಂಆರ್‌ಐ ಯಂತ್ರದ ಕುರಿತು ಮಾಹಿತಿ ನೀಡಿದರು.