ಮಣಿಪಾಲ ಮ್ಯಾರಥಾನ್: ದಾಖಲೆಯ 15 ಸಾವಿರ ಸ್ಪರ್ಧಿಸುವ ನಿರೀಕ್ಷೆ

Update: 2023-11-07 16:00 GMT

ಉಡುಪಿ, ನ.7: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ವತಿಯಿಂದ ಮುಂದಿನ ಫೆ.11ರಂದು ನಡೆಯುವ ಪ್ರತಿಷ್ಠಿತ ಮಣಿಪಾಲ ಮ್ಯಾರಥಾನ್‌ನ ಆರನೇ ಆವೃತ್ತಿಗೆ ಹೆಸರು ನೊಂದಾವಣೆ ಆರಂಭಗೊಂಡಿದ್ದು, ಈ ಬಾರಿ ವಿಶ್ವದಾದ್ಯಂತದ ಪ್ರಮುಖ ಮ್ಯಾರಥಾನ್ ಪಟುಗಳು ಸೇರಿದಂತೆ ದಾಖಲೆಯ 15,000 ಮಂದಿ ಸ್ಪರ್ಧಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಭಾರತದಲ್ಲಿ ವಿದ್ಯಾರ್ಥಿಗಳೇ ಸಂಘಟಿಸುವ ಅಥ್ಲೆಟಿಕ್ ಕೂಟದಲ್ಲಿ ಅದು ಅತ್ಯಂತ ದೊಡ್ಡದೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಮಣಿಪಾಲ ಹಾಗೂ ಉಡುಪಿ ಆಸುಪಾಸಿನಲ್ಲಿ ನಡೆಯುವ 42 ಕಿ.ಮೀ.ಗಳ ಪೂರ್ಣ ಮ್ಯಾರಥಾನ್, 21 ಕಿ.ಮೀ.ನ ಹಾಫ್ ಮ್ಯಾರಥಾನ್ ಅಲ್ಲದೇ ವಿದ್ಯಾರ್ಥಿ ಗಳಿಗೆ, ಹಿರಿಯರಿಗಾಗಿ 10ಕಿ.ಮೀ, 5ಕಿ.ಮೀ, 3ಕಿ.ಮೀ. ಸ್ಪರ್ಧೆಗಳು ಇರಲಿವೆ.

ಕಳೆದ ವರ್ಷ ಒಟ್ಟು 10,000 ಮಂದಿ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಈ ಬಾರಿ 15,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ. ಐಎಎಎಫ್ ಓಐಎಂಎಸ್‌ನ ಮಾನ್ಯತೆಯನ್ನು ಹೊಂದಿ ರುವ ಈ ಮ್ಯಾರಥಾನ್‌ನ್ನು ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ಸಂಯೋಜಿಸಲಾಗುತ್ತಿದೆ.

ಮಣಿಪಾಲ ಮ್ಯಾರಥಾನ್‌ನಲ್ಲಿ ಭಾಗವಹಿಸಲಿಚ್ಛಿಸುವವರು ಆನ್‌ಲೈನ್‌ನಲ್ಲಿ - https://manipalmarathon.in/- ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News