ಪರಶುರಾಮ ಥೀಮ್ ಪಾರ್ಕ್ ಪರಿಶೀಲನೆ ನಡೆಸಿದ ಮಂಜುನಾಥ ಭಂಡಾರಿ
ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಪ್ರದೇಶವು ಗೊಮಾಳ ಜಾಗವಾಗಿದ್ದ ಕಾರಣ ಅಂದಿನ ಬಿಜೆಪಿ ಸರಕಾರವು ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿತ್ತು. ಹೀಗಿದ್ದರು ಕೂಡ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದು ಮಂಜುನಾಥ ಭಂಡಾರಿ ಹೇಳಿದ್ದಾರೆ.
ಅವರು ಕಾರ್ಕಳ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ವಿವಾದಿತ ಪರಶುರಾಮ ಮೂರ್ತಿಯ ಪರಿಶೀಲನೆ ನಡೆಸಿ ಮಾತನಾಡಿದರು. ಮೂರ್ತಿಯ ಬಗ್ಗೆ ಈಗಾಗಲೇ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ವಾರ ಮುಖ್ಯಮಂತ್ರಿಗಳು ಜಿಲ್ಲೆಗೆ ಅಗಮಿಸಲಿದ್ದು ಅದರ ಮೊದಲು ಸತ್ಯಾಸತ್ಯತೆ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ ಎಂದರು.
ಈಗಾಗಲೇ 6.5 ಕೋಟಿ ರೂಪಾಯಿ ಹಣ ಸರಕಾರದಿಂದ ಬಿಡುಗಡೆ ಮಾಡಿದ್ದು ಉಳಿದ ಹಣವನ್ನು ಸರಕಾರದಿಂದ ಭರಿಸುವಂತೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಮನವಿ ಮಾಡಿದರು. ಅವರ ಮನವಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರೆ ಕಾಮಗಾರಿ ನಿಲ್ಲಿಸಲು ಹೇಳಿದ್ದಾರೆ. ಥೀಮ್ ಪಾರ್ಕ್ ಗೆ ಬಿಟ್ಟು ಕೊಡಲಾಗಿದೆ ಎಂಬ ಪೂರಕ ದಾಖಲೆಗಳನ್ನು ಕೊಡಲಿ, ನಂತರ ಸರಕಾರದ ಕಡೆಯಿಂದ ಬೇಕಾದ ಅಗತ್ಯ ನೆರವು ನೀಡಲಾಗುವುದು. ಅದರೆ ಪೂರಕ ದಾಖಲೆಗಳನ್ನು ಸಲ್ಲಿಸಲಿ. ನಮ್ಮ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.
ಫೈಬರ್ ತುಂಡುಗಳು ವೈರಲ್ : ಪರಶುರಾಮ ಥೀಮ್ ಪಾರ್ಕ್ ಮೇಲೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಕಟ್ಟಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ತೆರವು ಗೊಳಿಸಿದರು. ಪರಶುರಾಮ ಕಾಲಿನ ಭಾಗದ ಪಿಒಪಿ ತುಂಡುಗಳನ್ನು ತೆಗೆದು ಎಂ ಎಲ್ ಸಿ ಮಂಜುನಾಥ ಭಂಡಾರಿಯವರಿಗೆ ತೋರಿಸಿದರು.
ಫೈಬರ್ ಮೂರ್ತಿ ಬಗ್ಗೆ ಸ್ಪಷ್ಟೀಕರಣ ಕೊಡಿ ಎಂದು ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ವಿಚಲಿತಗೊಂಡ ಇಂಜಿನಿಯರ್ ಸಚಿನ್ ನಿರ್ಮಿತಿ ಕೆಂದ್ರದ ನಿರ್ದೇಶಕರನ್ನು ಕೇಳುವಂತೆ ಕೇಳಿಕೊಂಡರು. ಪರಶುರಾಮ ಥೀಮ್ ಪಾರ್ಕ್ ಹಾಗೂ ವಿವಾದಿತ ಮೂರ್ತಿ ನಿರ್ಮಾಣ ಹೊಣೆ ಹೊತ್ತಿರುವ ನಿರ್ಮಿತಿ ಕೆಂದ್ರದ ನಿರ್ದೇಶಕ ಗೈರು ಹಾಜರಾಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಫೋನ್ ಮಾಡಿ ಸ್ಪಷ್ಟನೆ ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ತಾ ಪಂ ಮಾಜಿ ಸದಸ್ಯ ಸುಧಾಕರ ಶೆಟ್ಟಿ, ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷ ಬಿಲ್ಲವ ಮುಖಂಡ ಸುಬೀತ್ ಎನ್ ಆರ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯ ಹೈದರ್, ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.