ಆ.27ರಂದು ಮಿರಾಕಲ್ ಫಾರೆಸ್ಟ್ ಚಾಲೆಂಜ್ ಅಭಿಯಾನ
ಉಡುಪಿ, ಆ.17: ಸಣ್ಣ ಜಾಗದಲ್ಲಿ ಕಾಡು ಬೆಳೆಸಿ ಮರಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಮಿರಾಕಲ್ ಫಾರೆಸ್ಟ್ ಚಾಲೆಂಜ್ ಅಭಿಯಾನವನ್ನು ಆರಂಭಿಸ ಲಾಗಿದ್ದು, ಈ ಮೂಲಕ ಆ.27ರಂದು ಉಚಿತ ಆನ್‌ಲೈನ್ ಮಿಯಾವಾಕಿ ಅರಣ್ಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಿರಾಕಲ್ ಚಾಲೆಂಜಿನ ಪ್ರವರ್ತಕ ಕೆ.ಮಹೇಶ್ ಶೆಣೈ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಭಾಗದಲ್ಲಿರುವ ಸಣ್ಣ ಜಾಗದಲ್ಲೂ ಅಂದರೆ ಒಂದು ಸೆಂಟ್ಸ್ ಜಾಗದಲ್ಲಿ ಒಂದು ಮೀಟರ್ ಅಂತರದಲ್ಲಿ ಒಟ್ಟು 100 ಗಿಡಗಳನ್ನು ನೆಟ್ಟು ಮಿಯವಾಕಿ ವನ ಬೆಳೆಸುವ ಈ ಅಭಿಯಾನವನ್ನು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೆಳಗ್ಗೆ 10ಗಂಟೆಗೆ ಆನ್‌ಲೈನ್ ಮೂಲಕ ಉದ್ಘಾಟಿಸಲಿರುವರು ಎಂದರು.
ಈ ಮಿರಾಕಲ್ ಫಾರೆಸ್ಟ್ ಚಾಲೆಂಜ್ ಮೂಲಕ ದೇಶದಲ್ಲಿ 500 ಮಿಯ ವಾಕಿ ಅರಣ್ಯ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೆ 150 ಮಂದಿ ಕಾರ್ಯಾಗಾರಕ್ಕೆೆ ನೋಂದಾಯಿಸಿಕೊಂಡಿದ್ದಾರೆ. ಅಗತ್ಯ ಬಿದ್ದರೆ ಮುಂದೆ ಕೂಡ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ಮನೋಜ್ ಕಡಬ, ಮುರಳೀಧರ್ ಎಚ್.ಎಸ್., ಕಾಂತರಾಜ್ ಸಾಗರ್, ಮುಹಮ್ಮದ್ ಮುಸ್ತಾಫ್, ಪ್ರೇಮಾನಂದ ಕಲ್ಮಾಡಿ ಉಪಸ್ಥಿತರಿದ್ದರು.