ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ; ತ್ವರಿತ ಕೋರ್ಟ್ ಸ್ಥಾಪಿಸಲು ಸರಕಾರಕ್ಕೆ ಶಿಫಾರಸ್ಸು: ಅಬ್ದುಲ್ ಅಝೀಮ್
ಉಡುಪಿ : ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಪೊಲೀಸರು ತನಿಖೆಯ ಮೂಲಕ ಅಪರೂಪದಲ್ಲಿ ಅಪರೂಪವಾಗಿರುವ ಪ್ರಕರಣ ಎಂಬುದಾಗಿ ನ್ಯಾಯಾಲಯದ ಎದುರು ಸಾಬೀತುಪಡಿಸಬೇಕು ಮತ್ತು ವರ್ಷದೊಳಗೆ ಪ್ರಕರಣದ ತನಿಖೆ ಮುಗಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿ, ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಮರಣದಂಡನೆ ಕೊಡಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಹೇಳಿದ್ದಾರೆ.
ನೇಜಾರಿನ ತೃಪ್ತಿ ಲೇಔಟ್‌ನಲ್ಲಿರುವ ಕೃತ್ಯ ನಡೆದ ಮನೆಗೆ ಇಂದು ಭೇಟಿ ನೀಡಿದ ಅವರು, ಸಂತ್ರಸ್ತ ನೂರ್ ಮುಹಮ್ಮದ್, ಅವರ ಸಂಬಂಧಿಕರಾದ ಅಶ್ರಫ್ ಕೆ., ಇಕ್ಬಾಲ್ ಹೈಕಾಡಿ ಅವರಿಗೆ ಸಾಂತ್ವಾನ ಹೇಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.
ಇದು ಜಿಲ್ಲೆಯ ಎಲ್ಲ ಶಾಂತಿಪ್ರಿಯ ಹಾಗೂ ಸೌಹಾರ್ದ ಬಯಸುವ ಹಿಂದು ಮುಸ್ಲಿಮರ ಒತ್ತಾಯ ಆಗಬೇಕು ಮತ್ತು ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಈ ಮೂಲಕ ಆ ಕುಟುಂಬದವರಿಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಲಹೆ ಕೊಡುತ್ತೇನೆ ಮತ್ತು ಆಯೋಗದ ವತಿಯಿಂದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಶಿಫಾರಸ್ಸು ಮಾಡುತ್ತೇನೆ ಎಂದರು.
ಮನೆಯೊಳಗೆ ಕೊಲೆಗೀಡಾದ ನಾಲ್ವರು ಬಿದ್ದ ಸ್ಥಳವನ್ನು ಪರಿಶೀಲನೆ ಮಾಡಿದಾಗ ಆರೋಪಿ ಎಲ್ಲ ರೀತಿಯ ತಯಾರಿ ಮಾಡಿಕೊಂಡೇ ಬಂದು ಈ ಕೊಲೆ ಮಾಡಿದ್ದಾನೆ ಎಂಬುದು ಕಂಡುಬರುತ್ತದೆ. ಬೇರೆ ಕೊಲೆಗೂ ಈ ಕೊಲೆಗೆ ಬಹಳ ವ್ಯಾತ್ಯಾಸ ಇದೆ. ಆರೋಪಿ ನಾಲ್ವರ ಮೇಲೆ ಯಾವುದೇ ರೀತಿಯ ದಯೆ ತೋರಿಸದೆ ಕೃತ್ಯ ಎಸಗಿದ್ದಾನೆ. ಆದುದರಿಂದ ಆತ ದೊಡ್ಡ ಕ್ರಿಮಿನಲ್ ಆಗಿದ್ದು, ಆತನಲ್ಲಿ ಯಾವುದೇ ಮಾನವೀಯತೆ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.
ಈ ಪ್ರಕರಣದ ತನಿಖೆಯನ್ನು ಜಿಲ್ಲೆಯ ಪೊಲೀಸರೇ ಮಾಡಲಿ. ಇದಕ್ಕೆ ಸಿಐಡಿ ತನಿಖೆ ಅಗತ್ಯ ಇಲ್ಲ. ಆದರೆ ಈ ಪ್ರಕರಣದ ಮೇಲ್ವಿಚಾರಣೆಯನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿಯವರು ವಹಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರಕರಣದ ತನಿಖೆ ವಿಳಂಬವಾಗಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಕ್ಫ್ ಉಡುಪಿ ಜಿಲ್ಲಾ ಸಲಹಾ ಮಂಡಳಿ ಅಧ್ಯಕ್ಷ ಅಬ್ದುಲ್ ಮುತ್ತಾಲಿಬ್, ಮಾಜಿ ಅಧ್ಯಕ್ಷ ಯಾಹ್ಯಾ ನಕ್ವಾ, ಮುಖಂಡರಾದ ಎಂ.ಎ.ಗಫೂರ್, ಸಲೀಂ ಅಂಬಾಗಿಲು, ಉಡುಪಿ ನಮ್ಮ ನಾಡ ಒಕ್ಕೂಟದ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್, ಕೇಂದ್ರ ಸಮಿತಿ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಮಗನಿಗೆ ಎಸ್ಸೈ ಹುದ್ದೆ: ಸರಕಾರಕ್ಕೆ ಪತ್ರ
ಈ ಕೃತ್ಯದಿಂದ ಕಳೆದು ಹೋದ ಜೀವಗಳು ಸರಕಾರದ ಆಸ್ತಿಯಾಗಿವೆ. ಇವತ್ತು ಸರಕಾರ ಈ ಆಸ್ತಿಗಳನ್ನು ಕಳೆದುಕೊಂಡಿದೆ. ಈ ಪ್ರಕರಣ ಮುನ್ನಡೆಸುವುದರ ಜೊತೆಗೆ ಸಂತ್ರಸ್ತ ನೂರ್ ಮುಹಮ್ಮದ್ ಅವರ ಹಿರಿಯ ಮಗ ಮುಹಮ್ಮದ್ ಅಸಾದ್‌ಗೆ ಪರಿಹಾರದ ಆಧಾರದ ಮೇರೆಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಹೇಳಿದರು.
ಆತನಿಗೆ ಮೊದಲು ಎಸ್ಸೈ ಹುದ್ದೆ ಕೊಡಬೇಕು. ಮುಂದೆ ಆತ ಒಳ್ಳೆಯ ಎಸ್ಪಿ ಕೂಡ ಆಗಬಹುದು. ಆತನಿಗೆ ನಾನು ತರಬೇತಿ ನೀಡುತ್ತೇನೆ. ಈ ಕೆಲಸ ಮಾಡಿದರೆ ಇಡೀ ಸಮುದಾಯಕ್ಕೆ ಸರಕಾರದ ಮೇಲೆ ನಂಬಿಕೆ ಬರುತ್ತದೆ. ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಶಿಫಾರಸ್ಸು ಮಾಡಲಾಗುವುದು ಎಂದರು.
ಕುಸಿದು ಬಿದ್ದ ನೂರ್ ಮುಹಮ್ಮದ್
ಸಾಂತ್ವಾನ ಹೇಳಲು ಬಂದ ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಅವರ ಮುಂದೆಯೇ ಕುಟುಂಬದ ನಾಲ್ವರನ್ನು ಕಳೆದು ಕೊಂಡ ನೂರ್ ಮುಹಮ್ಮದ್ ಕುಸಿದು ಬಿದ್ದರು.
ಮನೆಯೊಳಗೆ ಕೊಲೆ ನಡೆದ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದುಕೊಂಡು ಮೊಬೈಲ್‌ನಲ್ಲಿದ್ದ ಮೃತದೇಹಗಳ ಫೋಟೋವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ತನ್ನ ಕೊನೆಯ ಮಗನ ಫೋಟೋ ಕಂಡ ನೂರ್ ಮುಹಮ್ಮದ್ ಮಾನಸಿಕವಾಗಿ ಜರ್ಜರಿತರಾಗಿ ಅಲ್ಲೇ ಕುಸಿದು ಬಿದ್ದು ಅಸ್ವಸ್ಥರಾದರು. ಅಬ್ದುಲ್ ಅಝೀಮ್ ಸಹಿತ ಅಲ್ಲಿದ್ದವರು ಅವರನ್ನು ಕೂಡಲೇ ಮೇಲಕ್ಕೆ ಎತ್ತಿ ಸಮಾಧಾನ ಪಡಿಸಿದರು.