ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಫೆಬ್ರವರಿ ಮೊದಲ ವಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ
ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ನೇಜಾರು ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಪೊಲೀಸ್ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಈ ಸಂಬಂಧ ಮಲ್ಪೆ ಪೊಲೀಸರು ಫೆಬ್ರವರಿ ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ನೇಜಾರು ತೃಪ್ತಿ ಲೇಔಟ್‌ನ ನೂರು ಮುಹಮ್ಮದ್ ಎಂಬವರ ಪತ್ನಿ ಹಸೀನಾ (48) ಹಾಗೂ ಅವರ ಪುತ್ರಿಯರಾದ ಅಫ್ನಾನ್(23) ಮತ್ತು ಅಯ್ನಾಝ್ (21) ಹಾಗೂ ಪುತ್ರ ಆಸೀಮ್(13) ಎಂಬವರನ್ನು ಮಂಗಳೂರಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಉದ್ಯೋಗಿಯಾಗಿದ್ದ ಪ್ರವೀಣ್ ಚೌಗುಳೆ 2023ರ ನ.12ರಂದು ಹಾಡುಹಗಲೇ ಮನೆಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದನು. ಹಸೀನಾ ಅವರ ಅತ್ತೆ ಹಾಜಿರಾ (70) ಚೂರಿ ಇರಿತದಿಂದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿ ಎಂಟು ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿತ್ತು. ನ.14ರಂದು ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಉಡುಪಿ ಎಸ್ಪಿ ಡಾ.ಅರುಣ್ ಕೆ. ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಕೃತ್ಯ ನಡೆದ ದಿನದಿಂದ 90 ದಿನಗಳೊಳಗೆ ಪೊಲೀಸರು ಪ್ರಕರಣದ ತನಿಖೆ ಪೂರ್ಣಗೊಳಿಸಿ ಮೊದಲ ಹಂತದ ಚಾರ್ಜ್ ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಅದರಂತೆ ನ.12ರ ನೇಜಾರು ಕೊಲೆ ಪ್ರಕರಣ ನಡೆದು ಫೆ.12ಕ್ಕೆ 90 ದಿನಗಳು ಪೂರ್ಣಗೊಳ್ಳಲಿದೆ.
ಬಂಧಿತ ಆರೋಪಿಯನ್ನು ತನಿಖಾಧಿಕಾರಿ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸದ್ಯ ಆರೋಪಿಯ ನ್ಯಾಯಾಂಗ ಬಂಧನ ಅವಧಿಯು ಫೆ.7ರವರೆಗೆ ವಿಸ್ತಾರಗೊಂಡಿದೆ.
ತನಿಖಾಧಿಕಾರಿಗಳು ನೇಜಾರು ಪ್ರಕರಣದ ಚಾರ್ಜ್‌ಶೀಟ್‌ನ್ನು ಇದೇ ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ಮರಣದಂಡನೆ ಯಂತಹ ಶಿಕ್ಷೆ ವಿಧಿಸಬಹುದಾದ ಗಂಭೀರ ಪ್ರಕರಣವಾಗಿರುವುದರಿಂದ ಇದರ ವಿಚಾರಣೆಯು ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಲಿದೆ. ಈ ಪ್ರಕ್ರಿಯೆಯು ಚಾರ್ಜ್‌ಶೀಟ್ ಸಲ್ಲಿಸಿದ ದಿನವೇ ಆಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಎಫ್‌ಎಸ್‌ಎಲ್ ವರದಿ: ಕೊಲೆಗೈದ ಬಳಿಕ ಆರೋಪಿ ರಕ್ತದ ಕಲೆಗಳಿರುವ ಬಟ್ಟೆಯನ್ನು ಮಂಗಳೂರಿಗೆ ಹೋಗುವ ದಾರಿ ಮಧ್ಯೆ ಸುಟ್ಟು ಹಾಕಿದ್ದನು. ಇದನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾ ಲಯಕ್ಕೆ ಕಳುಹಿಸಿದ್ದರು. ಅದೇ ರೀತಿ ಘಟನಾ ಸ್ಥಳದಲ್ಲಿ ದೊರೆತ ಹಲವು ಸಾಕ್ಷ್ಯಗಳನ್ನು ಪೊಲೀಸರು ಪ್ರಯೋಗಾಲಯಕ್ಕೆ ಕಳುಹಿಸಿ ವರದಿಗಾಗಿ ಕಾಯುತ್ತಿದ್ದರು.
ಇದೀಗ ಎಫ್‌ಎಸ್‌ಎಲ್‌ಗೆ ಸಂಬಂಧಿಸಿದ ಎಲ್ಲ ವರದಿಗಳು ಪೊಲೀಸರ ಕೈ ಸೇರಿದ್ದು, ಈ ಮೂಲಕ ತನಿಖೆ ಪೂರ್ಣ ಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದುದರಿಂದ ಪೊಲೀಸರು ಚಾರ್ಜ್‌ಶೀಟ್ ಸಿದ್ಧ ಪಡಿಸುತ್ತಿದ್ದು, ಈಗಾಗಲೇ ಅದು ಅಂತಿಮ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಚಾರ್ಜ್‌ಶೀಟ್‌ನ್ನು ಫೆಬ್ರವರಿ ಮೊದಲ ವಾರದಲ್ಲೇ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ಸರಕಾರದ ಪರವಾಗಿ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರಿನ ನ್ಯಾಯವಾದಿ ಶಿವಪ್ರಸಾದ್ ಆಳ್ವ ಅವರನ್ನು ನೇಮಕ ಮಾಡಿ ಆದೇಶಿಸಿದೆ. ಮುಂದೆ ಈ ಪ್ರಕರಣದ ಪರವಾಗಿ ಇವರೇ ಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದಾರೆ.
‘ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸ್ ತನಿಖೆ ಪೂರ್ಣಗೊಂಡಿದ್ದು, ಎಫ್‌ಎಸ್‌ಎಲ್ ವರದಿ ಗಳೆಲ್ಲವೂ ನಮ್ಮ ಕೈಸೇರಿದೆ. ಈ ಕುರಿತ ಚಾರ್ಜ್‌ಶೀಟ್‌ನ್ನು ಸಿದ್ಧ ಪಡಿಸುತ್ತಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಕೋರ್ಟ್‌ಗೆ ಸಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಗಳನ್ನು ಮಾಡಲಾಗುತ್ತಿದೆ’
-ಡಾ.ಅರುಣ್ ಕೆ., ಉಡುಪಿ ಎಸ್ಪಿ