ಎನ್.ಸಿ. ಮಹೇಶ್‌ಗೆ ಅಂಬಾತನಯ ಮುದ್ರಾಡಿ ಪ್ರಶಸ್ತಿ ಪ್ರದಾನ

ಉಡುಪಿ: ರಂಗಭೂಮಿ ಉಡುಪಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಅಂಬಾತನಯ ಮುದ್ರಾಡಿ ಸಂಸ್ಮರಣ ಪುಸ್ತಕ ಪ್ರಶಸ್ತಿಯನ್ನು ‘ಸಾಕು ತಂದೆ ರೂಮಿ’ ಕೃತಿಯ ಲೇಖಕ ಎನ್.ಸಿ.ಮಹೇಶ್ ಅವರಿಗೆ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ವಿ.ವಿ. ಸಹ ಕುಲಾಧಿಪತಿ ಹಾಗೂ ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ರಂಗ ಭೂಮಿ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಮಕ್ಕಳು, ಯುವ ಜನತೆ ಇದರತ್ತ ಹೆಚ್ಚು ಹೆಚ್ಚು ಆಕರ್ಷಿಸುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಚ್.ಗೋಪಾಲ ಭಟ್ಟ(ಕುಗೋ) ಅವರಿಗೆ ರಂಗಭೂಮಿ ಸನ್ಮಾನ ನೆರವೇರಿಸಲಾಯಿತು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿಶ್ವ ರಂಗಭೂಮಿ ದಿನ ಮತ್ತು ಅಂಬಾತನಯ ಸಂಸ್ಮರಣಾ ನುಡಿಗಳನ್ನಾಡಿದರು.
ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಸಾಹಿತಿ ಡಾ.ಕೆ.ಎಂ.ರಾಘವ ನಂಬಿಯಾರ್, ಅಂಬಾತನಯ ಮುದ್ರಾಡಿ ಸಹೋದರ ವಿಜಯ ಕುಮಾರ್, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಭಾಸ್ಕರ್‌ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್ ಉಪಸ್ಥಿತರಿದ್ದರು.
ರಂಗಭೂಮಿ ಅಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮಿತಾಂಜಲಿ ಕಿರಣ್ ಪ್ರಶಸ್ತಿ ಪತ್ರ ವಾಚಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.