ಸಮಾನತೆಗಾಗಿ ಹೋರಾಡಿದ ಸಂತ ನಾರಾಯಣಗುರು: ಸಂಸದ ಕೋಟ

Update: 2024-08-20 13:58 GMT

ಉಡುಪಿ: ಶತಮಾನಗಳ ಹಿಂದೆ ಸಮಪಾಲು-ಸಮಬಾಳ್ವೆಗಾಗಿ ಧ್ವನಿ ಎತ್ತಿದ ನಾರಾಯಣ ಗುರುಗಳು ಯಾವುದೇ ರಕ್ತ ಕ್ರಾಂತಿಗಳಿಲ್ಲದೆ ತಮ್ಮ ಮಾತು ಹಾಗೂ ಬದ್ಧತೆಗಳ ಮೂಲಕ ಸಮಾಜದಲ್ಲಿದ್ದ ಮೇಲು-ಕೀಳು ಎಂಬ ಅಂಧಕಾರವನ್ನು ಹೋಗಲಾಡಿಸಿ, ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳವಾರ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಲ್ಲವ ಸಮಾಜ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಾತಿ ಪದ್ದತಿ, ಅಸ್ಪ್ರಶ್ಯತೆ, ಜೀತ ಪದ್ದತಿ ಹಾಗೂ ಮಹಿಳಾ ದೌರ್ಜನ್ಯ ಮುಂತಾದ ಮೂಢನಂಬಿಕೆ ನಿವಾರಣೆಗಾಗಿ ಶ್ರಮಿ ಸಿದ ನಾರಾಯಣ ಗುರುಗಳ ಜೀವನ ಹಾಗೂ ಹೋರಾಟ ಇಂದಿಗೂ ಎಲ್ಲರಿಗೆ ಆದರ್ಶಪ್ರಾಯ ಎಂದು ಕೋಟ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಧ್ಯೇಯವಾಕ್ಯವನ್ನು ಹೊಂದಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕಬೇಕು ಎಂಬ ಉದ್ದೇಶದಿಂದ ಸಮಾನತೆಯ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತುವುದರೊಂದಿಗೆ ಮಾನವರೆಲ್ಲರೂ ಒಂದೇ ಎಂಬ ತತ್ವವನ್ನು ವಿಶ್ವಕ್ಕೆ ಸಾರಿದರು. ದೇಶದ ಹಿಂದುಳಿದ ವರ್ಗಗಳ ಏಳಿಗೆಯಲ್ಲಿ ಗುರುಗಳ ಪಾತ್ರ ಮಹತ್ವ ದ್ದಾಗಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ನಾರಾಯಣಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ತಳ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಧಾರ್ಮಿಕ ಕ್ರಾಂತಿಯನ್ನು ಪ್ರಾರಂಭಿಸಿ ಸಮುದಾಯಕ್ಕೆ ಧೈರ್ಯ ತುಂಬಿದ ನಾರಾಯಣ ಗುರುಗಳು, ನಂತರದ ದಿನಗಳಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿಯಾದರು ಎಂದರು.

ಪ್ರತಿಯೊಂದು ದೇವಸ್ಥಾನಗಳು ಶೈಕ್ಷಣಿಕ ಹಾಗೂ ಕೈಗಾರಿಕಾ ಕೇಂದ್ರಗಳಾಗಿ ಬದಲಾಗಬೇಕು ಎಂಬ ಪರಿಕಲ್ಪನೆ ಹೊಂದಿದ್ದ ಅವರು ದೇವಸ್ಥಾನಗಳನ್ನು ಸಾಮಾಜಿಕ ಕ್ರಾಂತಿಯ ಒಂದು ಮಾರ್ಗವಾಗಿ ಉಪಯೋಗಿಸುವುದರ ಜೊತೆಗೆ ಸರಕಾರಿ ಶಾಲೆಗಳಲ್ಲಿ ತಳ ಸಮುದಾಯದ ಮಕ್ಕಳಿಗೆ ಪ್ರವೇಶ ನೀಡುವಂತೆ ಅನೇಕ ಚಳುವಳಿಗಳನ್ನು ಮಾಡುವ ಮೂಲಕ ತಳ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಪಡೆಯುವಲ್ಲಿ ಶ್ರಮಿಸಿದರು ಎಂದರು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ಪ್ರಯುಕ್ತ ಅಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಪೆ ಸೆಂಟ್ರಲ್ ವಾರ್ಡ್ ನಗರಸಭಾ ಸದಸ್ಯೆ ಎಡ್ಲೀನ್ ಕರ್ಕಡ, ತಹಶೀಲ್ದಾರ್ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ ಬಂಗೇರ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ದಿನೇಶ್ ಎ. ಸುವರ್ಣ, ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ತೇಜಸ್ ಕಾರ್ಯಕ್ರಮ ನಿರೂಪಿಸಿದರು. ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವರ್ಗೀಸ್ ಅವರು ಕೊನೆಯಲ್ಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News