ಮಾಹೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Update: 2024-02-28 16:56 GMT

ಉಡುಪಿ: ಇಂದಿನ ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ, ಬೆಳೆಸುವ ಅಗತ್ಯತೆ ಇದ್ದು, ವಿಜ್ಞಾನಕ್ಕೆ ಸಂಬಂಧಿಸಿದ ಇಂಥ ಕಾರ್ಯಕ್ರಮಗಳು ಅದಕ್ಕೆ ಪೂರಕವಾಗಿರುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟಿದ್ದಾರೆ.

ಮಾಹೆಯ ಆಶ್ರಯದಲ್ಲಿ ಮಣಿಪಾಲ ಸ್ಕೂಲ್ ಆಫ್ ಹೆಲ್ತ್ ಸಾಯನ್ಸ್ (ಎಂಎಸ್ ಎಲ್‌ಎಸ್) ಬುಧವಾರ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಅಕಾಡೆಮಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ವಾರದ ವಿಜ್ಞಾನ ತರಬೇತಿಯ ಸಮಾರೋಪ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಾಲಾ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಂಥ ವಿಜ್ಞಾನ ತರಬೇತಿ ಶಿಬಿರಗಳನ್ನು ಪ್ರೇರಣೆಯನ್ನು ನೀಡುತ್ತವೆ ಎಂದು ಡಾ.ಬಲ್ಲಾಳ್ ತಿಳಿಸಿದರು.

ಒಂದು ವಾರ ಕಾಲ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಣಿಪಾಲ ಸುತ್ತಮುತ್ತಲಿನ ಅಕಾಡೆಮಿ ಶಾಲೆಗಳ 9 ಮ್ತು 10ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ 25 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಂಐಟಿ, ಎಂಕಾಪ್ಸ್, ಕೆಎಂಸಿ, ಡಿಎಎಂಪಿ, ವಾಗ್ಷ ಸೇರಿದಂತೆ ಮಾಹೆಯ ವಿವಿಧ ಘಟಕಗಳು ತರಬೇತಿಯಲ್ಲಿ ಕೈಜೋಡಿಸಿದ್ದವು.

ತರಬೇತಿ ವೇಳೆ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣದ ವಿವಿಧ ಮುಖಗಳನ್ನು ಪರಿಚಯಿಸಲಾಯಿತು. ಮಾಹೆಯ ಜೀವವಿಜ್ಞಾನ, ಆರೋಗ್ಯ ವಿಜ್ಞಾನ, ಔಷಧ ವಿಜ್ಞಾನ, ತಂತ್ರಜ್ಞಾನ, ಆಹಾರ ವಿಜ್ಞಾನ, ನಿಸರ್ಗ ವಿಜ್ಞಾನ, ಬಯೋಪೋಟೊನಿಕ್ಸ್, ಬಯೋಥೆರಾಪಿಟಿಕ್ ಸಂಶೋಧನ ವಿಭಾಗಗಳಲ್ಲದೇ ವಸ್ತುಸಂಗ್ರಹಾಲಯ, ಪ್ಲಾನೇಟೋರಿಯಂಗಳಿಗೂ ಅವರನ್ನು ಕರೆದೊಯ್ದು ಪರಿಚಯಿಸಲಾಯಿತು.

ನಿನ್ನೆ ಮತ್ತು ಇಂದು ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಉಡುಪಿ ಆಸುಪಾಸಿನ ನೂರಾರು ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನಗಳನ್ನು ವೀಕ್ಷಿಸಿದರು.

ಇಂದು ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಇಸ್ರೋದ ಪ್ರಥಮ ಮಹಿಳಾ ಯೋಜನಾ ನಿರ್ದೇಶಕರಾಗಿದ್ದ ಡಾ.ಅನುರಾಧ ಟಿ.ಕೆ. ಹಾಗೂ ಮಾಹೆಯ ಕುಲಪತಿಗಳಾದ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಮುಖ್ಯ ಅತಿಥಿಗಳಾಗಿದ್ದು, ತರಬೇತಿ ಶಿಬಿರದಲ್ಲಿ ಭಾಗವಹಿಸಿದ 25 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿ ಸಲಾಯಿತು.

ಎಂಎಸ್‌ಎಲ್‌ಎಸ್‌ನ ನಿರ್ದೇಶಕರಾದ ಡಾ.ಬಿ.ಎಸ್.ಸತೀಶ್ ರಾವ್ ಹಾಗೂ ಮಾಹೆಯ ವಿವಿಧ ಘಟಕಗಳ ಬೋಧಕರು, ಸಂಶೋಧನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News