ಮಕ್ಕಳ ಸಾಮಾಜಿಕ ಅಭ್ಯಾಸಗಳ ಕುರಿತು ಜಾಗೃತಿ ಅಗತ್ಯ: ರಾಘವ ಶೆಟ್ಟಿ
ಬ್ರಹ್ಮಾವರ: ಶಾಲೆಗೆ ಹೋಗುವ ಮಕ್ಕಳ ಆಹಾರ ಅಭ್ಯಾಸಗಳು ಹಾಗೂ ಸಾಮಾಜಿಕ ಅಭ್ಯಾಸಗಳ ಕುರಿತಂತೆ ಪೋಷ ಕರು ಹಾಗೂ ಶಿಕ್ಷಕರು ನಿರಂತರವಾಗಿ ಗಮನವಹಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಬ್ರಹ್ಮಾವರ ತಾಲೂಕು ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ ಹೇಳಿದ್ದಾರೆ.
ಕಾಡೂರು ಗ್ರಾಮ ಪಂಚಾಯತ್‌ನಲ್ಲಿ ಇಂದು ನಡೆದ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಮಕ್ಕಳು ತಿನ್ನುವ ಚಾಕೋಲೇಟ್‌ಗಳಂತಹ ತಿನಿಸುಗಳಿಂದಲೂ ಅಮಲು ಬರಿಸುವ ಮತ್ತು ಅಭ್ಯಾಸ ವಾಗಿಸುವ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದರಿಂದ ಪ್ರತೀ ಹಂತದಲ್ಲೂ ಜಾಗೃತಿ ಅಗತ್ಯವಿದೆ ಎಂದರು.
ಕಾಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಮಾತನಾಡಿ, ಸ್ವಚ್ಛತೆಯ ಅನುಷ್ಠಾನದಲ್ಲಿ ಕಾಡೂರು ಹಾಗೂ ನಡೂರು ಗ್ರಾಮಗಳು ಮಾದರಿ ಕೆಲಸಗಳನ್ನು ಅನುಷ್ಠಾನ ಮಾಡಿದ್ದು ವಾರಕ್ಕೊಮ್ಮೆ ಎರಡು ಗಂಟೆಗಳನ್ನು ಗ್ರಾಮದ ಸ್ವಚ್ಛತೆಗಾಗಿ ಮೀಸಲಿರಿಸುವ ಇಲ್ಲಿನ ನಾಗರಿಕ ಹಾಗೂ ಸಂಘಸಂಸ್ಥೆಗಳ ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಮತ್ತು ಭಾಸ್ಕರ್ ಪೂಜಾರಿ, ಸಮುದಾಯ ಆರೋಗ್ಯ ಅಧಿಕಾರಿ ಮಂಜುಳ ಮಾತನಾಡಿದರು.
ಕಾಡೂರು ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರಾದ ರಘುರಾಮ ಶೆಟ್ಟಿ, ಪಾಂಡುರಂಗ ಶೆಟ್ಟಿ, ವಿಜಯ ಮರಕಾಲ, ಸತೀಶ್, ವೀಣಾ, ಅಮ್ಮಣ್ಣಿ, ಅಮಿತಾ, ಗುಲಾಬಿ, ಗಿರಿಜಾ, ಕಂದಾಯ, ಅರಣ್ಯ, ಆರೋಗ್ಯ, ಪಶುವೈದ್ಯ, ಮೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖಾಧಿ ಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಗಳು, ಎಸ್‌ಎಲ್‌ಆರ್‌ಎಂ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಸತೀಶ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್. ಕೆ ಕಾರ್ಯಕ್ರಮ ನಿರೂಪಿಸಿದರು.